ಎಫ್‌ಎಸ್‌ಎಲ್‌ ವರದಿ ವಿಳಂಬಕ್ಕಾಗಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವುದು 21ನೇ ವಿಧಿಯ ಉಲ್ಲಂಘನೆ: ರಾಜ್ಯ ಹೈಕೋರ್ಟ್

ಆರೋಪಿತ ವ್ಯಕ್ತಿ ಬಂಧನದಲ್ಲಿದ್ದಾಗ ಅವರಿಗೆ ತ್ವರಿತ ವಿಚಾರಣೆ ಬಯಸುವ ಹಕ್ಕಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಎಫ್‌ಎಸ್‌ಎಲ್‌ ವರದಿ ವಿಳಂಬಕ್ಕಾಗಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವುದು 21ನೇ ವಿಧಿಯ ಉಲ್ಲಂಘನೆ: ರಾಜ್ಯ ಹೈಕೋರ್ಟ್

ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಸೂಕ್ತ ಸಮಯಕ್ಕೆ ವರದಿ ನೀಡಲು ವಿಫಲವಾಗಿದೆ ಎಂಬ ಕಾರಣಕ್ಕೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಆರೋಪಿತ ವ್ಯಕ್ತಿ ಬಂಧನದಲ್ಲಿದ್ದಾಗ ಅವರಿಗೆ ತ್ವರಿತ ವಿಚಾರಣೆ ಬಯಸುವ ಹಕ್ಕಿದೆ ಎಂದು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. “ಯಾವುದೇ ಕಾರಣಕ್ಕೆ ಎಫ್‌ಎಸ್‌ಎಲ್‌ ವರದಿ ವಿಳಂಬವಾದರೂ ಅದು ಕಾನೂನಿನ ಅಡಿಯಲ್ಲಿ ಪ್ರತಿರೋಧಿಸಲಾಗದ ಸ್ಥಿತಿಗೆ ಕಾರಣವಾಗುತ್ತದೆ,” ಎಂದು ನ್ಯಾಯಾಲಯ ಹೇಳಿದೆ.

ಡಿಎನ್‌ಎ ವರದಿಯನ್ನು ತಡವಾಗಿ ಸ್ವೀಕರಿಸಿದ ಕಾರಣ ಅರ್ಜಿದಾರರು ಪ್ರಕರಣದಲ್ಲಿ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಕೋರಿದ್ದರು. ಡಿಎನ್‌ಎ ಪರೀಕ್ಷಾ ವರದಿ ಮತ್ತು ಎಫ್‌ಎಸ್‌ಎಲ್‌ನಿಂದ ಇದೇ ರೀತಿಯ ವರದಿಗಳು ಬರುವವರೆಗೂ ವಿಚಾರಣೆ ಮುಂದೂಡಬೇಕೆಂದು ಅವರು ಪ್ರಾರ್ಥಿಸಿದ್ದರು. ಅಲ್ಲದೆ ಎಫ್‌ಎಸ್‌ಎಲ್‌ನಿಂದ ವರದಿಗಳು ತಡವಾಗುತ್ತಿರುವ ಸಂಬಂಧ ಬಾಕಿ ಉಳಿದಿರುವ ಪ್ರಕರಣಗಳ ವಿವಿಧ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸುವಂತೆ ಅರ್ಜಿದಾರರು ಕೋರಿದ್ದರು. 35,738 ಕ್ಕೂ ಹೆಚ್ಚು ಮಾದರಿಗಳು ಪರೀಕ್ಷೆ ನಡೆಸಬೇಕಿರುವುದರಿಂದ ಸುಮಾರು 6,994 ಪ್ರಕರಣಗಳು ಬಾಕಿ ಉಳಿದಿವೆ ಎಂದು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅಪರಾಧ ಪ್ರಕರಣಗಳಲ್ಲಿ ವರದಿಗಳನ್ನು ಸಲ್ಲಿಸಲು ತೆಗೆದುಕೊಂಡ ಸಮಯ ನ್ಯಾಯಾಲಯಕ್ಕೆ ಆಘಾತ ಉಂಟುಮಾಡಿದೆ. ದಾಖಲೆಯಲ್ಲಿ ದತ್ತಾಂಶವನ್ನು ಪರಿಗಣಿಸಿದ ನ್ಯಾಯಾಲಯ ʼಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದ ವರದಿ ಸಲ್ಲಿಸಲು ಒಂದು ವರ್ಷ ಹಿಡಿಯುತ್ತಿದ್ದರೆ, ಕಂಪ್ಯೂಟರ್ / ಮೊಬೈಲ್ / ಆಡಿಯೋ-ವಿಡಿಯೋ ವಿಧಿವಿಜ್ಞಾನ ಮತ್ತು ಡಿಎನ್‌ಎ ಪರೀಕ್ಷೆಗೆ ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತಿದೆ ಎಂದಿತು.

ನ್ಯಾಯಾಲಯದ ಪ್ರಕಾರ ವಿಳಂಬ ವರದಿಯಿಂದಾಗುವ ಪರಿಣಾಮಗಳು:

  • ಎಫ್‌ಎಸ್‌ಎಲ್‌ ವರದಿ ಸಲ್ಲಿಸುವಿಕೆಯಲ್ಲಿ ಉಂಟಾಗುವ ವಿಳಂಬ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಚಾರಣಾಧೀನ ಕೈದಿಗಳು, ಮುಗ್ಧರು ಜೈಲಿನಲ್ಲಿಯೇ ದೀರ್ಘಕಾಲ ಇರಬೇಕಾಗಬಹುದು.

  • ಸಂತ್ರಸ್ತರು ಅಥವಾ ಅವರ ಕುಟುಂಬ ʼಯಾವಾಗ ಏನಾಗಲಿದೆʼ ಎಂಬುದು ತಿಳಿಯದೆ ತೊಂದರೆ ಅನುಭವಿಸಬೇಕಾಗುತ್ತದೆ.

  • ವರದಿ ವಿಳಂಬವಾಗುವುದರಿಂದ ವಿಚಾರಣೆ ಮಾತ್ರ ವಿಳಂಬವಾಗುವುದಿಲ್ಲ ಬದಲಿಗೆ ಸಾಕ್ಷ್ಯದ ಮಾದರಿ ನಾಶವಾಗಬಹುದು ಇಲ್ಲವೇ ಕಲುಷಿತಗೊಳ್ಳಬಹುದು ಅದು ವಿಧಿ ವಿಜ್ಞಾನ ಪರೀಕ್ಷೆಯ ಉದ್ದೇಶವನ್ನೇ ನಿರಾಕರಿಸುತ್ತದೆ.

ತ್ವರಿತ ವಿಚಾರಣೆಗೆ ಉಂಟಾಗುತ್ತಿರುವ ದೊಡ್ಡ ಅಡಚಣೆ ಎಂದರೆ ವಿಧಿ ವಿಜ್ಞಾನ ವರದಿಗಳ ಸಲ್ಲಿಸುವಿಕೆಯಲ್ಲಿ ಉಂಟಾಗುತ್ತಿರುವ ವಿಳಂಬ.
- ಕರ್ನಾಟಕ ಹೈಕೋರ್ಟ್‌

ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಂತಹ ಗಂಭೀರ ಅಪರಾಧಗಳ ತನಿಖೆಯಲ್ಲಿ ಡಿಎನ್‌ಎ ವರದಿಗಳು, ರಾಸಾಯನಿಕ ವಿಶ್ಲೇಷಣೆ ವರದಿಗಳು, ಜೈವಿಕ ವಿಶ್ಲೇಷಣೆ ವರದಿಗಳಂತಹ ವಿಧಿವಿಜ್ಞಾನ ಸಾಕ್ಷ್ಯಗಳು ವಹಿಸುವ ಪಾತ್ರವನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ಪೂರ್ವ ಜಗತ್ತಿನ ಸಿಲಿಕಾನ್‌ ಕಣಿವೆ ಎಂಬ ಹೆಗ್ಗಳಿಕೆಯೊಂದಿಗೆ ಮಾಹಿತಿ ತಂತ್ರಜ್ಞಾನದ ಮುಂಚೂಣಿ ನೆಲೆಯಾಗಿರುವ ಕರ್ನಾಟಕದಲ್ಲಿ 13 ವಿಭಾಗಗಳು ಕಾರ್ಯನಿರ್ವಹಿಸುತ್ತಿರುವ ಒಂದೇ ಒಂದು ಎಫ್‌ಎಸ್‌ಎಲ್ ಇರುವುದು ಅಸಂಗತ ಮತ್ತು ಅಸ್ವೀಕಾರಾರ್ಹ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಶಿಫಾರಸುಗಳು:

  • ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಆರು ತಿಂಗಳ ಒಳಗಾಗಿ ಎಸ್‌ಎಫ್‌ಎಸ್‌ಎಲ್‌ ಮತ್ತು ಆರ್‌ಎಫ್‌ಎಸ್‌ಎಲ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬತಕ್ಕದ್ದು.

  • ಬಾಕಿ ಇರುವ ಮಾದರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ರೂಪಿಸಿ ಈ ಮಾದರಿಗಳಿಗೆ ಸಂಬಂಧಿಸಿದ ವರದಿಗಳನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸುವುದು.

  • ಮಾದರಿ ಸಂಗ್ರಹಿಸಿದ ಅವಧಿಯಿಂದ ನ್ಯಾಯಾಲಯದಲ್ಲಿ ವರದಿ ಸಲ್ಲಿಸುವ ದಿನಾಂಕದವರೆಗಿನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮೇಲ್ವಿಚಾರಣಾ ವ್ಯವಸ್ಥೆ ಸ್ಥಾಪಿಸುವ ಅಗತ್ಯವಿದೆ.

  • ಲಭ್ಯವಿರುವ ಉಪಕರಣಗಳು, ಪ್ರಯೋಗಾಲಯಗಳ ಆಧುನೀಕರಣ ಮತ್ತು ಕಾಲಕಾಲಕ್ಕೆ ನವೀಕರಿಸಬೇಕಾದ ಸಲಕರಣೆಗಳ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಂದು ಅಧ್ಯಯನದ ಅಗತ್ಯವಿದೆ.

  • ಎಫ್‌ಎಸ್‌ಎಲ್‌ ಅಧಿಕಾರಿ ನಿರ್ದಿಷ್ಟ ರೀತಿಯಲ್ಲಿ ಹಾಜರಾಗುವುದು ಮತ್ತು ಹೇಳಿಕೆ ನೀಡುವುದು ಅಗತ್ಯವಿದ್ದರೂ ಕೂಡ ವೀಡಿಯೊ ಕಾನ್ಫರೆನ್ಸ್‌ ಮೂಲಕ ಅದನ್ನು ಸುಗಮಗೊಳಿಸಲು ಅನುಮತಿ ನೀಡುವುದು ಸೂಕ್ತ.

  • ವರದಿ ತಯಾರಿಕೆ ಮುಂದೂಡಲು ಕಾರಣಗಳೇನು ಎಂಬ ಬಗ್ಗೆ ವಿಚಾರಣಾ ನ್ಯಾಯಾಲಯ ಕಟ್ಟುನಿಟ್ಟಿನ ಜಾಗ್ರತೆ ವಹಿಸಬೇಕು. ವರದಿಗಳನ್ನು ಶೀಘ್ರ ಸಲ್ಲಿಸುವಂತೆ ಅದು ಒತ್ತಾಯಿಸಬೇಕು.

Related Stories

No stories found.
Kannada Bar & Bench
kannada.barandbench.com