ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಆರ್‌ಟಿಇ ವಿಸ್ತರಣೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಸರ್ಕಾರ 2026ರ ಮೇ 21ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಂಘ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌.
Karnataka HC and RTE Act
Karnataka HC and RTE Act
Published on

ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯಿದೆ ಅಡಿ 2025-26ನೇ ಶೈಕ್ಷಣಿಕ ವರ್ಷಗಳಲ್ಲಿ ಎಂಟನೇ ತರಗತಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿವರೆಗೂ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಿ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿದೆ.

ರಾಜ್ಯ ಸರ್ಕಾರ 2026ರ ಮೇ 21ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಖಾಸಗಿ ಅನುದಾನರಹಿತ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರತಿನಿಧಿ ಸಂಸ್ಥೆಯಾಗಿರುವ ಕರ್ನಾಟಕದ ಖಾಸಗಿ ಶಾಲೆಗಳ ಸಂಘ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Ashok Kinagi
Justice Ashok Kinagi

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯ ಪರಿಶೀಲನೆಗೊಳಪಡಬೇಕಾದ ಅವಶ್ಯಕತೆಯಿದ್ದು, ಅಂತಿಮ ಇತ್ಯರ್ಥದ ತನಕ ಸುತ್ತೋಲೆಯ ಜಾರಿಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಪರಿಗಣಿಸಲಾಗುತ್ತಿದ್ದು, ಮುಂದಿನ ವಿಚಾರಣೆವರೆಗೆ ಸುತ್ತೋಲೆಗೆ ತಡೆ ನೀಡಲಾಗಿದೆ ಎಂದು ಹೇಳಿತು. ಅಲ್ಲದೆ, ಅರ್ಜಿ ಸಂಬಂಧ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿತು.

2026ರ ಮೇ 21ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ 2025-26ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಪೂರ್ಣಗೊಳಿಸಿರುವ ಎಸ್‌ಸಿ ಮತ್ತು ಎಸ್‌ಟಿ ವರ್ಗದ ವಿದ್ಯಾರ್ಥಿಗಳು ಆರ್‌ಟಿಸಿ ಕಾಯಿದೆ ಸೆಕ್ಷನ್‌ 12(1)(ಸಿ) ಅಡಿಯಲ್ಲಿ ಅದೇ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿಯನ್ನು ಮುಂದುವರಿಸಬಹುದು ಎಂದು ಹೇಳಲಾಗಿದೆ. ಈ ಸುತ್ತೋಲೆ ಶಿಕ್ಷಣ ಹಕ್ಕು ಕಾಯಿದೆ 2009 ಹಾಗೂ ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳು- 2012ಕ್ಕೆ ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆರ್‌ಟಿಇ ಕಾಯಿದೆಯ ಈ ವಿಧಿಯು 9 ಮತ್ತು 10ನೇ ತರಗತಿಗೆ ಅನ್ವಯಿಸುವುದಿಲ್ಲ. ಸುತ್ತೋಲೆ ಮೂಲಕ ಅದರ ವ್ಯಾಪ್ತಿಯನ್ನು ಅನಧಿಕೃತವಾಗಿ ವಿಸ್ತರಿಸಲಾಗಿದೆ. ಆರ್‌ಟಿಇ ಕಾಯಿದೆ 6ರಿಂದ 14 ವರ್ಷದ ಮಕ್ಕಳಿಗೆ ಮಾತ್ರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೀಡುತ್ತದೆ. ಸುತ್ತೋಲೆ ಮೂಲಕ 9 ಮತ್ತು 10ನೇ ತರಗತಿಗೆ ಈ ಸೌಲಭ್ಯ ವಿಸ್ತರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕೇವಲ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ವಿಸ್ತರಿಸಿರುವುದು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ವಿರುದ್ಧವಾಗಿದ್ದು, ಇದು ತಾರತಮ್ಯಪೂರ್ಣ ಕ್ರಮ. ಅಲ್ಲದೆ, ಈ ಆದೇಶವನ್ನು ಮುಖ್ಯಮಂತ್ರಿಗಳ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನದ ಮೇರೆಗೆ ಹೊರಡಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ಸ್ವತಂತ್ರವಾಗಿ ವಿಚಾರ ಪರಿಶೀಲನೆ ನಡೆಸಿಲ್ಲ. ಆದ್ದರಿಂದ 2026ರ ಮೇ 21ರ ಸುತ್ತೋಲೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com