ಪಾಲಿಕೆ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಣೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕೆಎಸ್‌ಎಸ್‌ಎಸ್‌ ವಿಸ್ತರಣೆ ಮಾಡುವಂತೆ ಕೋರಿ ಅರ್ಜಿದಾರ ಸಂಘವು 2026ರ ಫೆಬ್ರವರಿ 6ರಂದು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಮತ್ತು ಫೆಬ್ರವರಿ 11ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡಿತ್ತು.
High Court of Karnataka
High Court of Karnataka
Published on

ರಾಜ್ಯದ ಎಲ್ಲಾ ನಗರ ಪಾಲಿಕೆಯ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಸ್‌ಎಸ್‌ಎಸ್‌) ವಿಸ್ತರಿಸುವ ಕುರಿತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಲ್ಲಿಸಿರುವ ಮನವಿ ಪರಿಗಣಿಸಿ ಎರಡು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್ ಕೃಷ್ಣ ಕುಮಾರ್‌ ಅವರ ಪೀಠ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ವಿ ಶ್ರೀನಿವಾಸ್‌ ವಾದ ಮಂಡಿಸಿ “ರಾಜ್ಯದಲ್ಲಿ ನಗರ ಪಾಲಿಕೆಯ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆಎಸ್‌ಎಸ್‌ಎಸ್‌) ವಿಸ್ತರಣೆ ಮಾಡುವಂತೆ ಕೋರಿ ಅರ್ಜಿದಾರ ಸಂಘವು 2026ರ ಫೆಬ್ರವರಿ 6ರಂದು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಮತ್ತು ಫೆಬ್ರವರಿ 11ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡಿದೆ. ಆದರೆ, ಸಂಘದ ಈ ಮನವಿಯನ್ನು ಸರ್ಕಾರ ಈವರೆಗೂ ಪರಿಗಣಿಸಿಲ್ಲಯೂ ಮತ್ತು ಮನವಿ ಆಧರಿಸಿ ಯಾವುದೇ ಆದೇಶ ಸಹ ಮಾಡಿಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸರ್ಕಾರದ ಪರ ವಕೀಲರು “ಸೂಕ್ತ ಕಾಲಾವಕಾಶ ಒದಗಿಸಿದರೆ ಅರ್ಜಿದಾರರ ಮನವಿ ಪತ್ರ ಪರಿಗಣಿಸಿ ಅಗತ್ಯ ಆದೇಶ ಹೊರಡಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ಮನವಿ ಪತ್ರವನ್ನು ಎರಡು ತಿಂಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ  ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ, ಇತ್ಯರ್ಥಪಡಿಸಿದೆ.

Kannada Bar & Bench
kannada.barandbench.com