ಶಕ್ತಿ ಯೋಜನೆ ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಮನವಿ: ಎರಡು ತಿಂಗಳೊಳಗೆ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಖಾಸಗಿ ಬಸ್ ಆಪರೇಟರ್‌ಗಳ ಸಂಕಷ್ಟ ಪ್ರಾರಂಭವಾಗಿದೆ. ಹೀಗಾಗಿ, ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Shakti scheme and Karnataka HC
Shakti scheme and Karnataka HC

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ಕರ್ನಾಟಕ ಹೈಕೋರ್ಟ್, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಾಲಯ ಆದೇಶಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದಿಸಿದರು.

ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ 65 ವರ್ಷಗಳ ಇತಿಹಾಸವಿದೆ. ಸುಮಾರು 16 ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿವೆ. ರಾಜ್ಯದಲ್ಲಿ 75 ಸಾವಿರ ಕಾರ್ಮಿಕರು ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ ಖಾಸಗಿ ಬಸ್ ಆಪರೇಟರ್‌ಗಳು ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದು, ವಾರ್ಷಿಕ 1,620 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಖಾಸಗಿ ಬಸ್ ಆಪರೇಟರ್‌ಗಳ ಸಂಕಷ್ಟ ಪ್ರಾರಂಭವಾಗಿದೆ. ಹೀಗಾಗಿ, ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯ ಮಾಡಬೇಕು. ಸರ್ಕಾರಿ ಬಸ್‌ಗಳಂತೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಯಾಣ ವೆಚ್ಚವನ್ನು ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಮರು ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ 2023ರ ಜುಲೈ 26ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಆದೇಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

Kannada Bar & Bench
kannada.barandbench.com