ರೌಡಿ ಶೀಟರ್‌ ಅಶೋಕ್‌ ಪೈ ಗಡಿಪಾರು: ಮಂಡ್ಯ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್‌ ತಡೆ

ಅಶೋಕ್ ಪೈ ಅನ್ನು 2023ರ ಮಾರ್ಚ್‌ 15ರಿಂದ ಜುಲೈ 15ರವರೆಗೆ ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
Karnataka High Court
Karnataka High Court

ಅಪರಾಧ ಚಟುವಟಿಕೆಯಲ್ಲಿ ನಿರತವಾಗಿರುವ ಆರೋಪದ ಮೇಲೆ ರೌಡಿಶೀಟರ್ ಅಶೋಕ ಅಲಿಯಾಸ್ ಅಶೋಕ್ ಪೈ ಎಂಬುವರನ್ನು ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಮಂಧ್ಯಂತರ ತಡೆಯಾಜ್ಞೆ ಮಾಡಿದೆ.

ಗಡಿಪಾರು ಆದೇಶ ರದ್ದುಪಡಿಸುವಂತೆ ಕೋರಿ 50 ವರ್ಷದ ಅಶೋಕ ಅಲಿಯಾಸ್ ಅಶೋಕ್ ಪೈ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿಯಲ್ಲಿ ಪ್ರತಿವಾದಿಗಳಾದ ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶ ಮಾಡಿ, ವಿಚಾರಣೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸಿ ಎನ್ ರಾಜು ಅವರು, ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವ ಬಗ್ಗೆ ಅಶೋಕ್ ಪೈ ವಿರುದ್ಧ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಪಡಿಸಿರುವ ವರದಿಯಲ್ಲಿ ಸೂಕ್ತ ಸಾಕ್ಷ್ಯಧಾರಗಳಿಲ್ಲ. ಮೇಲಾಗಿ ಪೈ ಯಾವುದೇ ಅಪರಾಧ ಚಟುವಟಿಕೆಯಲ್ಲಿ ನಿರತರಾಗಿಲ್ಲ. ಗಡಿಪಾರು ಮಾಡುವ ಸಂಬಂಧ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದಾಗ ಜಿಲ್ಲಾಧಿಕಾರಿ ಮುಂದೆ ಅರ್ಜಿದಾರರು ಹಾಜರಾಗಿ, ಸೂಕ್ತ ವಿವರಣೆ ಮತ್ತು ಸಾಕ್ಷ್ಯಗಳನ್ನು ಒದಗಿಸಿ ಆಕ್ಷೇಪಣೆ ಸಹ ಸಲ್ಲಿಸಿದ್ದಾರೆ. ಅದೆಲ್ಲವನ್ನೂ ಕಡೆಗಣಿಸಿ ಮಾರ್ಚ್‌ 15ರಂದು ಜಿಲ್ಲಾಧಿಕಾರಿ ಗಡಿಪಾರು ಆದೇಶ ಹೊರಡಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದ್ದು, ಗಡಿಪಾರು ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಅಶೋಕ್ ಪೈ ಅವರನ್ನು 2023ರ ಮಾರ್ಚ್‌ 15ರಿಂದ ಜುಲೈ 15ರವರೆಗೆ ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

Related Stories

No stories found.
Kannada Bar & Bench
kannada.barandbench.com