ಉದ್ಯಮಿ ಹಾಗೂ ಜೆಡಿಎಸ್ ಮಾಜಿ ಮುಖಂಡ ವಿಜಯ್ ಟಾಟಾಗೆ ಬೆದರಿಕೆಯೊಡ್ಡಿದ ಆರೋಪ ಸಂಬಂಧ ಮೊದಲಿಗೆ ಸಂಜ್ಞೇಯೇತರ ಅಪರಾಧ ವರದಿ (ಎನ್‌ಸಿಆರ್) ದಾಖಲಿಸಿ ಹಿಂಬರಹ ನೀಡಿ, ಆನಂತರ ಏಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಕ್ಕೆ ಬೆಂಗಳೂರಿನ ಅಮೃತಹಳ್ಳಿ ಠಾಣಾಧಿಕಾರಿ ವಿವರಣೆ ಸಲ್ಲಿಸಬೇಕು. ಪ್ರಕರಣದಲ್ಲಿ ಠಾಣಾಧಿಕಾರಿ ಅಸ್ಥಿರವಾಗಿ ನಡೆದುಕೊಂಡಿರುವಂತಿದೆ ಎಂದು ಬುಧವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಎಂ ರಮೇಶ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ರಮೇಶ್‌ಗೌಡ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಮನೆಗೆ ಊಟಕ್ಕೆ ಹೋದಾಗ ದೂರುದಾರ ವಿಜಯ್ ತಾತಾ ಅವರನ್ನು ಉಪಚುನಾವಣೆಗೆ 50 ಕೋಟಿ ರೂಪಾಯಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. 23 ದಿನಗಳ ವಿಳಂಬದ ಬಳಿಕ ವಿಜಯ್ ಟಾಟಾ ಅವರು ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಮೊದಲಿಗೆ ಸಂಜ್ಞೆಯೇತರ ಅಪರಾಧ ವರದಿ (ಎನ್‌ಸಿಆರ್) ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ. ಆನಂತರ ಸುಲಿಗೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ನಡುವೆ ಏನಾಗಿದೆ ಎಂದು ರಾಜ್ಯ ಸರ್ಕಾರ ವಿವರಣೆ ನೀಡಬೇಕಿದೆ” ಎಂದರು.
ಮುಂದುವರಿದು, “ನಮಗೂ ಬೆದರಿಕೆ ಹಾಕಲಾಗಿದೆ ಎಂದು ರಮೇಶ್‌ಗೌಡ ಅವರು ನೀಡಿರುವ ದೂರನ್ನು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮೊದಲಿಗೆ ಹಿಂಬರಹ ನೀಡಿ ಆನಂತರ ಎಫ್‌ಐಆರ್ ದಾಖಲಿಸಿರುವುದರ ಬಗ್ಗೆ ಅಮೃತಹಳ್ಳಿ ಠಾಣಾಧಿಕಾರಿ ವಿವರಣೆ ನೀಡಬೇಕು” ಎಂದರು.
ಆಗ ಪೀಠವು ರಾಜ್ಯ ಸರ್ಕಾರವನ್ನು ಕುರಿತು “ಒಂದೇ ದೂರಿನ ಮೇಲೆ ಹಿಂಬರಹ ಆನಂತರ ಎಫ್‌ಐಆರ್ ದಾಖಲಿಸಿರುವುದು ಹೇಗೆ? ಇಲ್ಲಿ ಯಾವ ರೀತಿಯ ಚಂಚಲ ವರ್ತನೆ? ಇದೇ ಸಮಸ್ಯೆ. ನಾವು ಇಲ್ಲಿ ಮಧ್ಯಪ್ರವೇಶ ಮಾಡಬೇಕೆ ಅಥವಾ ಬೇಡವೇ?” ಎಂದಿತು.
ಅದಕ್ಕೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಹಿಂಬರಹ ನೀಡಿರುವುದು ಸರಿಯಲ್ಲ ಎನಿಸುತ್ತದೆ. ಆದರೆ, ಬೇರೊಂದು ದೂರನ್ನು ಆಧರಿಸಿ ಸುಲಿಗೆ ಪ್ರಕರಣ ದಾಖಲಿಸಿರಬಹುದು” ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.
ಈ ಮಧ್ಯೆ, ನಾವದಗಿ ಅವರು “ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು “ಅಮೃತಹಳ್ಳಿ ಠಾಣಾಧಿಕಾರಿಯು ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಮೊದಲಿಗೆ ಎನ್‌ಸಿಆರ್ ದಾಖಲಿಸಿ, ಆನಂತರ ಎಫ್‌ಐಆರ್ ಮಾಡಿರುವುದು ಏಕೆ ಎಂಬುದಕ್ಕೆ ಮುಂದಿನ ವಿಚಾರಣೆ ವೇಳೆಗೆ ವಿವರಣೆ ಸಲ್ಲಿಸಬೇಕು. ಇಲ್ಲಿ ಠಾಣಾಧಿಕಾರಿಯು ಚಂಚಲವಾಗಿ ನಡೆದುಕೊಂಡಿರುವಂತಿದೆ. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು” ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು.