ಸುಲಿಗೆ ಪ್ರಕರಣ: ವಿಧಾನ ಪರಿಷತ್‌ ಮಾಜಿ ಸದಸ್ಯ ಶ್ರೀಕಾಂತ್ ಘೊಟ್ನೇಕರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅರ್ಜಿದಾರರ ವಿರುದ್ಧ ಸುಲಿಗೆಯಂಥ ಗಂಭೀರ ಆರೋಪವಿದೆ. ಪ್ರಕರಣದ ಮೊದಲ ಆರೋಪಿ ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದಾರೆ. ಆದ್ದರಿಂದ, ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗದು ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ಸಿವಿಲ್ ಗುತ್ತಿಗೆದಾರರೊಬ್ಬರು ದಾಖಲಿಸಿರುವ ಸುಲಿಗೆ ಪ್ರಕರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಾಂತ್ ಘೊಟ್ನೇಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಶ್ರೀಕಾಂತ್ ಎಲ್.ಘೊಟ್ನೇಕರ್ ಹಾಗೂ ಮತ್ತೊಬ್ಬ ಆರೋಪಿ ಅನಿಲ್ ಚೌವ್ಹಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್ ಯಾದವ್ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ವಿರುದ್ಧ ಸುಲಿಗೆಯಂಥ ಗಂಭೀರ ಆರೋಪವಿದೆ. ಪ್ರಕರಣದ ಮೊದಲ ಆರೋಪಿ ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದಾರೆ. ಆದ್ದರಿಂದ, ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗದು. ಅರ್ಜಿದಾರರು ವಿಚಾರಣೆಯನ್ನು ಎದುರಿಸಲಿ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್‌ನ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಶ್ರೀಕಾಂತ್ ಘೊಟ್ನೇಕರ್ ವಿರುದ್ಧ ಗುತ್ತಿಗೆದಾರ ವಸಂತ್ ನೀಲಕಂಠ ಚೊರ್ಲೇಕರ್ ಎಂಬುವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಳಿಯಾಳದ ಕ್ಷತ್ರಿಯ ಮರಾಠ ಭವನಕ್ಕೆ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಟೆಂಡರ್ ಪಡೆದಿದ್ದೆ. ದೇಣಿಗೆ ಹಣದಿಂದ ಸ್ಲಾಬ್ ಹಾಕಿಸಿದ್ದ ಶ್ರೀಕಾಂತ್ ಘೊಟ್ನೇಕರ್, ಕ್ಷತ್ರಿಯ ಮರಾಠ ಪರಿಷತ್‌ನಿಂದ ಬಿಲ್ ಮಾಡಿಸಿದ್ದರು. ಜತೆಗೆ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ 3.71 ಲಕ್ಷ ರೂ. ಪಾವತಿಯಾಗಿತ್ತು. ಈ ಹಣ ತಮಗೆ ನೀಡುವಂತೆ ಶ್ರೀಕಾಂತ್ ಬೆದರಿಕೆ ಹಾಕಿದ್ದರು. ತಮ್ಮ ಕಾರ್‌ನಲ್ಲಿ ಬಲವಂತವಾಗಿ ಲಾಡ್ಜ್ ಒಂದಕ್ಕೆ ಕರೆದೊಯ್ದು 3.33 ಲಕ್ಷ ರೂಪಾಯಿ ಚೆಕ್‌ಗೆ ಬಲವಂತವಾಗಿ ಸಹಿ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಿಂದ, ಬಂಧನದ ಭೀತಿ ಎದುರಿಸುತ್ತಿರುವ ಶ್ರೀಕಾಂತ್ ಘೊಟ್ನೇಕರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

Attachment
PDF
Srikanth Ghotnekar and other Versus State of Karnataka.pdf
Preview
Kannada Bar & Bench
kannada.barandbench.com