ಜಾಮೀನು ಆದೇಶ ಹರಿದು, ನ್ಯಾಯಾಧೀಶರನ್ನು ನಿಂದಿಸಿದ್ದ ಇನ್‌ಸ್ಪೆಕ್ಟರ್‌ಗೆ ವಿಚಾರಣೆ ಎದುರಿಸಲು ಆದೇಶಿಸಿದ ಹೈಕೋರ್ಟ್‌

ಕಾನೂನಿಗೆ ಗೌರವಿಸದ ವ್ಯಕ್ತಿಗೆ ನ್ಯಾಯಾಲಯ ಅನುಕಂಪ ತೋರಲಾಗದು ಎಂದು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.
Karnataka High Court, Police
Karnataka High Court, Police

ಜಾಮೀನು ಆದೇಶವನ್ನು ಹರಿದು, ನ್ಯಾಯಾಧೀಶರನ್ನು ನಿಂದಿಸಿದ ಪೊಲೀಸ್‌ ಅಧಿಕಾರಿಯ ವಿರುದ್ಧದ ಕಾನೂನು ಪ್ರಕ್ರಿಯೆ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಅಧಿಕೃತ ಕರ್ತವ್ಯನಿರ್ಹಿಸುವಾಗ ಆರೋಪಿಯು ಅಪರಾಧ ಎಸಗಿರುವುದರಿಂದ ಕರ್ನಾಟಕ ಪೊಲೀಸ್‌ ಕಾಯಿದೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ ಅಡಿ ಸೂಕ್ತ ಅನುಮತಿ ಪಡೆಯದೇ ಮ್ಯಾಜಿಸ್ಟ್ರೇಟ್‌ ಸಂಜ್ಞೇಯ ಪರಿಗಣಿಸಲಾಗದು ಎಂಬ ಪೊಲೀಸ್‌ ಅಧಿಕಾರಿ ವಿ ಹರೀಶ್‌ ವಾದವನ್ನು ನ್ಯಾಯಮೂರ್ತಿ ಕೆ ನಟರಾಜನ್‌ ತಿರಸ್ಕರಿಸಿದ್ದಾರೆ.

“ಜಾಮೀನು ಆದೇಶವನ್ನು ಹರಿದು ಬಿಸಾಡಿರುವುದು, ಜಾಮೀನು ನೀಡಿರುವ ಸತ್ರ ನ್ಯಾಯಾಧೀಶರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿರುವುದು, ತನ್ನ ಠಾಣೆಯಲ್ಲಿ ತಾನೇ ನ್ಯಾಯಾಧೀಶನಾಗಿದ್ದು ತಾನೇ ಪ್ರಕರಣವನ್ನು ನಿರ್ಧರಿಸುವುದಾಗಿ ಹೇಳಿರುವುದು ಮತ್ತು ಜಾಮೀನು ಆದೇಶ ತನ್ನ ಕೂದಲಿಗೆ ಸಮ ಎಂದಿರುವುದು, ಇವೆಲ್ಲವೂ ಅಧಿಕೃತ ಕರ್ತವ್ಯ ನಿರ್ವಹಣೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಇಂಥ ಕೃತ್ಯ ಎಸಗಿರುವ ಅಧಿಕಾರಿ ಹರೀಶ್‌ ವಿರುದ್ಧ ಪೊಲೀಸ್‌ ಇಲಾಖೆಯು ಇಲಾಖಾ ತನಿಖೆ ನಡೆಸುವ ಮೂಲಕ ಕ್ರಮಕೈಗೊಳ್ಳಬೇಕಿತ್ತು. ಇಂಥ ಅಧಿಕಾರಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಖಾಸಗಿ ದೂರಿನ ಪ್ರಕಾರ ಪ್ರಕರಣ ನಡೆದ ಸಂದರ್ಭದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಹರೀಶ್‌ ಅವರು ದೂರುದಾರರ ಪರವಾಗಿ ನ್ಯಾಯಾಲಯ ಜಾರಿ ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಅವರ ವಕೀಲರು ನೀಡಿದ್ದನ್ನು ಗೌರವಿಸುವುದಕ್ಕೆ ಬದಲಾಗಿ ಅದನ್ನು ಹರಿದು ಹಾಕಿದ್ದರು. ದೂರುದಾರರ ಪರವಾಗಿ ಜಾಮೀನು ಮಂಜೂರು ಮಾಡಿದ್ದ ಸತ್ರ ನ್ಯಾಯಾಧೀಶರನ್ನು ನಿಂದಿಸಿದ್ದ ಹರೀಶ್‌ ಅವರು ದೂರುದಾರರ ವಿರುದ್ಧ ರೌಡಿ ಶೀಟ್‌ ತೆಗೆಯುವುದಲ್ಲದೇ ಎನ್‌ಕೌಂಟರ್‌ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ದೂರು ಸ್ವೀಕರಿಸಿ, ದೂರುದಾರರ ಸ್ವಯಂ ಹೇಳಿಕೆ ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್‌ ಅವರು ಹರೀಶ್‌ಗೆ ಸಮನ್ಸ್‌ ಜಾರಿ ಮಾಡಿದ್ದರು.

ಇದನ್ನು ಹೈಕೋರ್ಟ್‌ನಲ್ಲಿ ಹರೀಶ್‌ ಪ್ರಶ್ನಿಸಿದ್ದು, ತಮ್ಮ ವಿರುದ್ಧ ಯಾವುದೇ ದೂರು ದಾಖಲಿಸಲಾಗಿಲ್ಲ. ಇನ್ನೊಂದು ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇದ್ದ ರಿವಾಲ್ವಾರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವಾದಿಸಿದ್ದರು.

ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ವಿಡಿಯೊ ರೆಕಾರ್ಡಿಂಗ್‌ಗಳು ಆರೋಪಿಯು ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿಸಿರುವುದನ್ನು ಹಾಗೂ ಸತ್ರ ನ್ಯಾಯಾಧೀಶರನ್ನು ನಿಂದಿಸಿರುವುದನ್ನು ತೋರಿಸುತ್ತವೆ ಎನ್ನುವುದನ್ನು ನ್ಯಾಯಮೂರ್ತಿಗಳು ಗಮನಿಸಿದರು. ಆರೋಪಿತ ಅಧಿಕಾರಿ ಹರೀಶ್‌ ಎಸಗಿರುವ ಅಪರಾಧವು ಐಪಿಸಿ ಸೆಕ್ಷನ್‌ಗಳಾದ 166ಎ, 340, 350, 499 ಮತ್ತು 506ರ ವ್ಯಾಪ್ತಿಗೆ ಒಳಪಡಲಿದ್ದು, ಅವು ಸಂಜ್ಞೇ ತೆಗೆದುವಂಥವುಗಳಾಗಿವೆ ಎಂದು ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

“ಐಪಿಸಿ ಸೆಕ್ಷನ್‌ 340 ದೂರುದಾರರನ್ನು ತಪ್ಪಾಗಿ ವಶದಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ್ದು, ಐಪಿಸಿ 350 ಕ್ರಿಮಿನಲ್‌ ಹಿನ್ನೆಲೆ ಸಂಬಂಧಿಸಿದ್ದು, ಐಪಿಸಿ ಸೆಕ್ಷನ್‌ 499 ನ್ಯಾಯಾಂಗದ ಘನತೆಗೆ ಹಾನಿ ಮಾಡುವ ಪದಗಳ ಬಳಕೆ, ಐಪಿಸಿ ಸೆಕ್ಷನ್‌ 506 ಕ್ರಿಮಿನಲ್‌ ಬೆದರಿಕೆಗೆ ಸಂಬಂಧಿಸಿದ್ದು, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 25 ಶಸ್ತ್ರಾಸ್ತ್ರವನ್ನು ಅಕ್ರಮವಾಗಿ ಬಳಸುವುದಾಗಿದೆ” ಎಂದರು.

“ಅರ್ಜಿದಾರರ ವಿರುದ್ಧದ ಅಪರಾಧಗಳು ಅವರು ಅಧಿಕೃತ ಕರ್ತವ್ಯ ನಿಭಾಯಿಸುತ್ತಿರಲಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ನ್ಯಾಯಾಂಗಕ್ಕೆ ಮಾನಹಾನಿ ಮಾಡಿದ್ದು, ನ್ಯಾಯಾಲಯದ ನಿರೀಕ್ಷಣಾ ಜಾಮೀನು ಆದೇಶಕ್ಕೆ ಅಗೌರವ ತೋರಿದ್ದಾರೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್‌ 197 (ಸಂವಿಧಾನದ ಅಡಿ ಸಾರ್ವಜನಿಕ ಅಧಿಕಾರಿಗೆ ರಕ್ಷಣೆ) ಅರ್ಜಿದಾರರ ನೆರವಿಗೆ ಬರುವುದಿಲ್ಲ” ಎಂದು ಪೂರ್ವಾನುಮತಿ ಪಡೆದಿಲ್ಲ ಎಂಬ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.

“ನ್ಯಾಯಾಲದ ಜಾಮೀನು ಆದೇಶವನ್ನು ಅಧಿಕಾರಿ ಹರೀಶ್‌ ಅವರಿಗೆ ಸಲ್ಲಿಸಿರುವ ವಕೀಲರು ಅಧಿಕಾರಿಯು ನ್ಯಾಯಾಲಯ ಮತ್ತು ದೂರುದಾರರ ವಿರುದ್ಧ ಕೆಟ್ಟದಾಗಿ ವರ್ತಿಸಿರುವುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ. ಕಾನೂನಿಗೆ ಗೌರವ ತೋರದ ಇಂಥ ಅಧಿಕಾರಿಗೆ ನ್ಯಾಯಾಲಯವು ಯಾವುದೇ ಅನುಕಂಪ ತೋರುವ ಅಗತ್ಯವಿಲ್ಲ. ಹೀಗಾಗಿ, ಇದು ಪ್ರಕ್ರಿಯೆ ವಜಾ ಮಾಡಲು ಸೂಕ್ತ ಪ್ರಕರಣವಲ್ಲ” ಎಂದು ಅರ್ಜಿ ವಜಾ ಮಾಡಿತು.

Related Stories

No stories found.
Kannada Bar & Bench
kannada.barandbench.com