ಮುಖ ಚಹರೆ ಗುರುತಿಸುವಿಕೆ ತಂತ್ರಜ್ಞಾನವು ಗಂಡಾಂತರಕಾರಿ ಕೃತಕ ಬುದ್ಧಿಮತ್ತೆಗೆ ಪ್ರಮುಖ ನಿದರ್ಶನ: ಸಿಜೆಐ ಚಂದ್ರಚೂಡ್

ಎ ಐ ಬಳಕೆಯಲ್ಲಿ ಪಕ್ಷಪಾತ ಮತ್ತು ಪರೋಕ್ಷ ತಾರತಮ್ಯ ನಡೆಯುವ ಸಾಧ್ಯತೆಯನ್ನು ಒತ್ತಿ ಹೇಳಿದ ಅವರು ಬಯೋಮೆಟ್ರಿಕ್ಸ್ ಅದರಲ್ಲಿಯೂ ಮುಖ ಗುರುತಿಸುವಿಕೆ ತಂತ್ರಜ್ಞಾನ ಅತಿಯಾಗಿ ಬಳಕೆಯಾಗುತ್ತಿರುವ ನಿದರ್ಶನ ನೀಡಿದರು.
ಮುಖ ಚಹರೆ ಗುರುತಿಸುವಿಕೆ ತಂತ್ರಜ್ಞಾನವು ಗಂಡಾಂತರಕಾರಿ ಕೃತಕ ಬುದ್ಧಿಮತ್ತೆಗೆ ಪ್ರಮುಖ ನಿದರ್ಶನ: ಸಿಜೆಐ ಚಂದ್ರಚೂಡ್

ಕಾನೂನು ವೃತ್ತಿ ಹಾಗೂ ಇಡೀ ಸಮಾಜದಲ್ಲಿ ಕೃತಕ ಬುದ್ಧಿಮತ್ತೆ (ಎ ಐ) ಸಾಧನಗಳ ಅಳವಡಿಕೆಯಿಂದ ಎದುರಾಗುತ್ತಿರುವ ಅಪಾಯಗಳ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಆತಂಕ ವ್ಯಕ್ತಪಡಿಸಿದರು.

ಭಾರತ ಮತ್ತು ಸಿಂಗಪೋರ್‌ ಸುಪ್ರೀಂ ಕೋರ್ಟ್‌ಗಳ ನಡುವಿನ ತಂತ್ರಜ್ಞಾನ ಮತ್ತು ನ್ಯಾಯಿಕ ಸಂವಾದ ಕುರಿತ ಎರಡು ದಿನಗಳ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಐ ಬಳಕೆಯಲ್ಲಿ ಪಕ್ಷಪಾತ ಮತ್ತು ಪರೋಕ್ಷ ತಾರತಮ್ಯ ನಡೆಯುವ ಸಾಧ್ಯತೆಯನ್ನು ಒತ್ತಿ ಹೇಳಿದ ಅವರು  ಬಯೋಮೆಟ್ರಿಕ್ಸ್‌ ಅದರಲ್ಲಿಯೂ ಮುಖ ಗುರುತಿಸುವಿಕೆ ತಂತ್ರಜ್ಞಾನ ಅತಿಯಾಗಿ ಬಳಕೆಯಾಗುತ್ತಿರುವ ನಿದರ್ಶನ ನೀಡಿದರು.  

ಎ ಐ ವ್ಯವಸ್ಥೆಗಳಲ್ಲಿ ತಾರತಮ್ಯದ ವಿಚಾರಕ್ಕೆ ಬಂದಾಗ ಪಕ್ಷಪಾತ ಎಂಬುದು ಸಂಕೀರ್ಣ ಸವಾಲನ್ನು ಒಡ್ಡುತ್ತದೆ. ತೋರಿಕೆಯಲ್ಲಿ ತಟಸ್ಥ ನೀತಿಗಳು ಅಥವಾ ಕ್ರಮಾವಳಿಗಳು ಕೆಲವು ಗುಂಪುಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಿದಾಗ ಈ ತಾರತಮ್ಯ ಉಂಟಾಗುತ್ತದೆ. ಇದರಿಂದಾಗಿ ಜನರ ಹಕ್ಕು ರಕ್ಷಣೆ ದುರ್ಬಲವಾಗುತ್ತದೆ. ಮುಖ ಗುರುತಿಸುವಿಕೆ ತಂತ್ರಜ್ಞಾನ (ಎಫ್‌ಆರ್‌ಟಿ) ಹೆಚ್ಚಿನ ಅಪಾಯಕಾರಿಯಾದ ಎ ಐ ತಂತ್ರಜ್ಞಾನದ ಉದಾಹರಣೆ ಎಂದು ಅವರು ನುಡಿದರು.

"ನ್ಯಾಯಾಲಯದ ತೀರ್ಪಿನಲ್ಲಿ ಎ ಐ ತಂತ್ರಜ್ಞಾನ ಬಳಕೆ ವಿಚಾರವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದ ಅವರು  ನ್ಯಾಯಾಲಯದ ವಿಚಾರಣೆಗಳು ಸೇರಿದಂತೆ ಆಧುನಿಕ ಪ್ರಕ್ರಿಯೆಗಳಲ್ಲಿ ಕೃತಕ ಬುದ್ಧಿಮತ್ತೆಯ ಒಳಗೊಳ್ಳುವಿಕೆಯು ಪರೀಕ್ಷಾರ್ಹವಾದ ಸಂಕೀರ್ಣವಾದ ನೈತಿಕ, ಕಾನೂನು ಮತ್ತು ಪ್ರಾಯೋಗಿಕ ಪರಿಗಣನೆಗಳನ್ನು ಹುಟ್ಟುಹಾಕುತ್ತದೆ. ನ್ಯಾಯ ನಿರ್ಧರಣ ಪ್ರಕ್ರಿಯೆಯಲ್ಲಿ ಎಐನ ಬಳಕೆಯು ಅವಕಾಶ ಮತ್ತು ಸವಾಲುಗಳನ್ನು ಒಡ್ಡುತ್ತದೆ, ಇವುಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಅಗತ್ಯವಿದೆ” ಎಂದು ಎಚ್ಚರಿಸಿದರು.

ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ಎ ಐ ಹಾಗೂ ಕಾನೂನು ವ್ಯವಸ್ಥೆ ಮೇಲೆ ಅದರ ಪರಿಣಾಮ, ನ್ಯಾಯಾಲಯದ ವಿಚಾರಣೆಗೆ ಸಹಾಯ ಮಾಡುವ ಸಾಮರ್ಥ್ಯ, ನ್ಯಾಯಾಂಗ ತರಬೇತಿಯಲ್ಲಿ ಅದರ ಪಾತ್ರ, ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು  ಸಿಂಗಪೋರ್‌ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಹಾಗೂ ಹಲವು ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು ಹಾಗೂ ಪರಿಣತರು ಚರ್ಚೆ ನಡೆಸಲಿದ್ದಾರೆ.

 ತಂತ್ರಜ್ಞಾನ ಮತ್ತು ಕಾನೂನು ವ್ಯವಸ್ಥೆಯ ಛೇದಕವನ್ನು ಅನ್ವೇಷಿಸಲು ಅದರಲ್ಲಿಯೂ ನ್ಯಾಯಾಂಗದಲ್ಲಿ ಎ ಐಯ ಪರಿವರ್ತಕ ಪಾತ್ರವನ್ನು ಕೇಂದ್ರೀಕರಿಸಿ ಈ ಸಮ್ಮೇಳನ ಆಯೋಜಿಸಲಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತ ಮತ್ತು ಸಿಂಗಪೋರ್‌ ಸರ್ವೋಚ್ಚ ನ್ಯಾಯಾಲಯಗಳ ಪ್ರಮುಖ ಭಾಗೀದಾರರು, ಶಿಕ್ಷಣ ತಜ್ಞರು ಹಾಗೂ ಕಾನೂನು ಮತ್ತು ತಾಂತ್ರಿಕ ಸಮುದಾಯಗಳ ಖ್ಯಾತನಾಮರು ಈ ಸಮಾರಂಭದಲ್ಲಿ ಭವಿಷ್ಯದ ಪ್ರಗತಿಯನ್ನು ಚರ್ಚಿಸಲು ಭಾಗವಹಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com