ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ಗುರುತು ಪತ್ತೆ ಪರೇಡ್ ಕುರಿತ ಅಂಶಗಳಿಗೆ ಹೆಚ್ಚು ಮಹತ್ವ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ರಾಜಾಜಿನಗರ ನಿವಾಸಿ ರಘು ಅಲಿಯಾಸ್ ಚಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ತುಮಕೂರಿನ ಬಟವಾಡಿ ಸರ್ವೀಸ್ ರಸ್ತೆಯಲ್ಲಿ 2018ರ ಸೆಪ್ಟೆಂಬರ್ 30ರಂದು ಎಚ್ ಆರ್ ರವಿಕುಮಾರ್ ಎಂಬವರ ಸಾವಿಗೆ ಕಾರಣವಾದ ಆರೋಪದ ಮೇಲೆ ರಘುವನ್ನು ಪೊಲೀಸರು ಬಂಧಿಸಿದ್ದು, ಈಗಾಗಲೇ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. 2019ರ ಜನವರಿ 17ರಂದು ಆರೋಪಿ ಗುರುತು ಪತ್ತೆ ಪರೇಡ್ ನಡೆಸಲಾಗಿತ್ತು. ನ್ಯಾಯಾಲಯದ 2ರಿಂದ 5ನೇ ಸಾಕ್ಷಿಗಳು ರಘುವನ್ನು ಗುರುತಿಸಿದ್ದರು. 1 ಮತ್ತು 6ನೇ ಸಾಕ್ಷಿಗಳು ರಘುವನ್ನು ಗುರುತಿಸಿರಲಿಲ್ಲ. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಿಗೆ ಅರ್ಜಿದಾರ ವೈಯಕ್ತವಾಗಿ ತಿಳಿದಿಲ್ಲ. ಹೀಗಾಗಿ, ಆರೋಪಿ ಗುರುತು ಪತ್ತೆ ಪರೇಡ್ ಕುರಿತ ಅಂಶಗಳ ಬಗ್ಗೆ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಯಲ್ಲಿ ದೃಢಪಡಬೇಕಿದೆ. ಜಾಮೀನು ಅರ್ಜಿ ವಿಚಾರಣೆಯ ಹಂತದಲ್ಲಿ ಆರೋಪಿ ಗುರುತು ಪತ್ತೆ ಪರೇಡ್‌ಗೆ ಹೆಚ್ಚು ಮಹತ್ವ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ
ಅಲ್ಲದೇ, ಈ ಪಕರಣದಲ್ಲಿ ಅರ್ಜಿದಾರ ಭಾಗಿಯಾಗಿರುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಅಂಶಗಳು ಕಂಡುಬಾರದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಮೃತನ ಪತ್ನಿ ಸವಿತಾ ನೀಡಿದ್ದ ದೂರು ಆಧರಿಸಿ ಕ್ಯಾತಸಂದ್ರ ಠಾಣಾ ಪೊಲೀಸರು ರಘುನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಆತ ಎಂಟನೇ ಆರೋಪಿಯಾಗಿದ್ದು, ಜಾಮೀನು ನೀಡಲು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯ ನಿರಾಕರಿಸ್ದಿರಿಂದ ರಘು ಹೈಕೋರ್ಟ್‌ನಲ್ಲಿ ಜಾಮೀನು ಕೋರಿದ್ದರು. ಅರ್ಜಿದಾರ ಪರ ವಕೀಲ ಎಚ್ ಸುನೀಲ್ ಕುಮಾರ್ ವಾದ ಮಂಡಿಸಿದ್ದರು.