ಸ್ಮಶಾನಕ್ಕೆ ಜಾಗ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನಿಂದನೆ ಆರೋಪ ನಿಗದಿಪಡಿಸಲು ಮುಂದಾದ ಹೈಕೋರ್ಟ್‌

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಜೂನ್‌ 30ರಂದು ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
Karnataka High Court
Karnataka High Court

ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜಮೀನು ಒದಗಿಸುವಂತೆ ಆದೇಶ ಮಾಡಿರುವುದನ್ನು ಪಾಲಿಸದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ಧರಿಸಿದೆ.

ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠವು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಜೂನ್‌ 30ರಂದು ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದಿದೆ.

ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 29,076 ಗ್ರಾಮಗಳಿವೆ. ಅದರಲ್ಲಿ ಒಟ್ಟು 27,648 ಗ್ರಾಮಗಳಿಗೆ ಮತ್ತು 299 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದೆ. ಇನ್ನೂ 1,428 ಗ್ರಾಮಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದೆ. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಅಲ್ಲದೆ, ಸರ್ಕಾರಿ ಜಮೀನು ಲಭ್ಯವಿಲ್ಲ. ಇದರಿಂದ ಖಾಸಗಿಯವರ ಜಮೀನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಸ್ಮಶಾನಕ್ಕೆ ತಮ್ಮ ಭೂಮಿ ನೀಡಲು ಜನ ಮುಂದೆ ಬರುತ್ತಿಲ್ಲ. ಹಾಗೆಯೇ, ಪ್ರತಿಯೊಂದು ಹಳ್ಳಿಯಲ್ಲೂ ವಿವಿಧ ಧರ್ಮ-ಜಾತಿಯ ಜನರು ತಮ್ಮದೇ ಆದ ವಿಭಿನ್ನ ಆಚರಣೆ ಮತ್ತು ಸಂಪ್ರದಾಯ ಹೊಂದಿದ್ದಾರೆ. ಇದರಿಂದ ಸ್ಮಶಾನಕ್ಕೆ ಜಾಗ ಒದಗಿಸಲು ಕಷ್ಟವಾಗಿದೆ. ಎರಡು ವರ್ಷ ಕಾಲಾವಕಾಶ ನೀಡಿದರೆ 1,428 ಗ್ರಾಮಗಳಿಗೆ ಮತ್ತು ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗುವುದು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು.

ಈ ಮನವಿಗೆ ಒಪ್ಪದ ಪೀಠವು ರಾಜ್ಯದ ಎಲ್ಲಾ ಗ್ರಾಮಗಳಿಗೂ ಸ್ಮಶಾನ ಒದಗಿಸಲು ಸರ್ಕಾರ ಈಗ ವರ್ಷ ಕಾಲಾವಕಾಶ ಕೋರಿದೆ. ಆದರೆ, ಏಕ ಸದಸ್ಯ ಪೀಠವು ಆದೇಶ ಹೊರಡಿಸಿಯೇ ಮೂರು ವರ್ಷ ಕಳೆದಿವೆ. ಆದರೂ ಹೈಕೋರ್ಟ್ ಆದೇಶವನ್ನು ಈವರೆಗೂ ಪಾಲಿಸಿಲ್ಲ. ಈ ವಿಚಾರದಲ್ಲಿ ಸರ್ಕಾರ ಈಗಲೂ ಕಣ್ತೆರೆದಿಲ್ಲ. ಹೈಕೋರ್ಟ್ ಮೌನವಾಗಿದ್ದರೆ ಸರ್ಕಾರ 20 ವರ್ಷ ಸಮಯ ಕೇಳುತ್ತದೆ. ಹಾಗಾಗಿ, ಮುಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜೂನ್‌ 30ಕ್ಕೆ ಮುಂದೂಡಿದೆ.

ಜೂನ್‌ 9ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಸೂಚಿಸಿ, 2019ರ ಆಗಸ್ಟ್‌ 20ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿತ್ತು. ಇದನ್ನು 15 ದಿನಗಳ ಒಳಗೆ ಪಾಲಿಸಬೇಕು. ತಪ್ಪಿದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿತ್ತು.

Related Stories

No stories found.
Kannada Bar & Bench
kannada.barandbench.com