ತಾಯಿಯ ಸಾವಿನ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಲು ವಿಫಲ: ವೈದ್ಯೆಗೆ ನೆರವಿನ ಹಸ್ತ ಚಾಚಿದ ಹೈಕೋರ್ಟ್‌

ಅರ್ಹರ ಕೊರತೆಯಿಂದ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ. ದಾಖಲೆಗಳ ಪರಿಶೀಲನೆಗೆ ಹಾಜರಾಗದಿರಲು ಸ್ನೇಹಾಗೆ ಇದ್ದ ಕಷ್ಟ ಪರಿಗಣಿಸಿ ಅವರ ಅರ್ಜಿಯನ್ನು ಕೆಎಟಿ ಪುರಸ್ಕರಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸಕಾರಣವಿಲ್ಲ ಎಂದಿರುವ ಹೈಕೋರ್ಟ್‌.
Karnataka High Court and doctor
Karnataka High Court and doctor

ಕೋವಿಡ್ ಸಂದರ್ಭದಲ್ಲಿ ತಾಯಿ ಮೃತಪಟ್ಟಿದ್ದರಿಂದ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ (ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್) ಹುದ್ದೆಯಿಂದ ವಂಚಿತರಾಗಿದ್ದ ವೈದ್ಯೆಯೊಬ್ಬರಿಗೆ ನೆರವಾಗಿರುವ ಕರ್ನಾಟಕ ಹೈಕೋರ್ಟ್, ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗೆ ವೈದ್ಯೆಗೆ ಅವಕಾಶ ಕಲ್ಪಿಸುವಂತೆ ಆರೋಗ್ಯ ಇಲಾಖೆಗೆ ಈಚೆಗೆ ನಿರ್ದೇಶಿಸಿದೆ [ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರ್ಸಸ್‌ ಡಾ. ಸ್ನೇಹಾ].

ವೈದ್ಯಕೀಯ ಅಧಿಕಾರಿ ಹುದ್ದೆಗೆ ಬೀದರ್‌ನ ಡಾ.ಸ್ನೇಹಾ ಅವರನ್ನು ಪರಿಗಣಿಸುವಂತೆ ನಿರ್ದೇಶಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಶಿವಶಂಕರ್‌ ಅಮರಣ್ಣವರ್‌ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಡಾ. ಸ್ನೇಹಾ ಮೆರಿಟ್ ಅಭ್ಯರ್ಥಿಯಾಗಿದ್ದಾರೆ. ವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿರುವ ಅಭ್ಯರ್ಥಿಗಿಂತ ಸ್ನೇಹಾ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಮೆರಿಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಅರ್ಹ ಅಭ್ಯರ್ಥಿಗಳು ಲಭ್ಯವಾಗದೆ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ದಾಖಲೆಗಳ ಪರಿಶೀಲನೆಗೆ ಹಾಜರಾಗದಿರಲು ಸ್ನೇಹಾ ಅವರಿಗೆ ಇದ್ದ ಸಂಕಷ್ಟದ ಪರಿಸ್ಥಿತಿ ಪರಿಗಣಿಸಿ ಅವರ ಅರ್ಜಿಯನ್ನು ಕೆಎಟಿಯು ಪುರಸ್ಕರಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಸಕಾರಣ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆ ನೇಮಕಾತಿಗೆ 2020ರ ಸೆಪ್ಟೆಂಬರ್‌ 10ರಂದು ಅರ್ಜಿ ಆಹ್ವಾನಿಸಿತ್ತು. ಡಾ.ಸ್ನೇಹಾ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ ಅವರು ಶೇ.61.23ರಷ್ಟು ಅಂಕ ಪಡೆದುಕೊಂಡಿದ್ದರು. ಸಾಮಾನ್ಯ ಮಹಿಳೆ ವರ್ಗದಡಿ ಮೀಸಲಾತಿಗೆ ಅವರನ್ನು ಪರಿಗಣಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಇಲಾಖೆ ಮುಂದಾಗಿತ್ತು. ಆ ವೇಳೆ ಸ್ನೇಹ ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ; ಮತ್ತೊಂದೆಡೆ ತಾಯಿ ಮೃತಪಟ್ಟಿದ್ದರು. ಈ ಸಂಕಷ್ಟ ಪರಿಸ್ಥಿತಿಯಿಂದ ಸ್ನೇಹಾ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ನೇಮಕಾತಿ ಅವಕಾಶದಿಂದ ಸ್ನೇಹ ವಂಚಿತರಾಗಿದ್ದರು.

ನಂತರ ಸ್ನೇಹಾ ಅವರಿಗಿಂತ ಕಡಿಮೆ ಅಂದರೆ ಶೇ.57.43ರಷ್ಟು ಅಂಕ ಪಡೆದಿದ್ದ ಮತ್ತೊಬ್ಬರನ್ನು ಈ ಕೋಟಾದಡಿ ನೇಮಕ ಮಾಡಲಾಗಿತ್ತು. ಇದರಿಂದ ಸ್ನೇಹಾ ಅವರು ಅಗತ್ಯ ದಾಖಲೆಗಳೊಂದಿಗೆ ಯಾವ ಕಾರಣಕ್ಕೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ವಿವರಣೆ ನೀಡಿದ್ದರು. ಜತೆಗೆ, ನೇಮಕಾತಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದರು. ಅದನ್ನು ಆರೋಗ್ಯ ಇಲಾಖೆ ಪರಿಗಣಿಸದ ಕಾರಣ ಸ್ನೇಹ ಕೆಎಟಿಗೆ ಅರ್ಜಿ ಸಲ್ಲಿಸಿ, 2021ರ ಮೇ 12ರಂದು ಪ್ರಕಟಿಸಲಾಗಿದ್ದ ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನು ಪ್ರಶ್ನಿಸಿದ್ದರು.

ಸ್ನೇಹ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ಕೆಎಟಿ, ಸಾಮಾನ್ಯ ಮಹಿಳಾ ಕೋಟಾದಡಿ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿದಾರನ್ನು ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿ 2022ರ ಸೆಪ್ಟೆಂಬರ್‌ 16ರಂದು ಆದೇಶಿಸಿತ್ತು. ಆದೇಶ ಪ್ರಶ್ನಿಸಿ ರಾಜ್ಯ ಆರೋಗ್ಯ ಇಲಾಖೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಇದು ಈಗ ವಜಾಗೊಂಡಿದೆ.

Attachment
PDF
State of Karnataka Vs Dr Sneha.pdf
Preview

Related Stories

No stories found.
Kannada Bar & Bench
kannada.barandbench.com