ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರ ಪ್ರಕರಣ: ಸಂಘಟನೆ ಅಧ್ಯಕ್ಷ, ವಕೀಲರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಹೈಕೋರ್ಟ್‌ ಆದೇಶ

ಮನವಿಯ ಮುಂದಿನ ವಿಚಾರಣೆಗೆ 10ನೇ ಪ್ರತಿವಾದಿ, ಮತ್ತವರ ವಕೀಲ ಹನುಮಂತಪ್ಪ ಬಿ. ಹರವಿ ಗೌಡರ್ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿರಬೇಕು. ತಪ್ಪಿದರೆ, ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಸಿದ ಪೀಠ.
Dr. B R Ambedkar and Karnataka HC

Dr. B R Ambedkar and Karnataka HC

ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಹರಪನಹಳ್ಳಿಯ ಡಾ. ಬಿ ಆರ್ ಅಂಬೇಡ್ಕರ್ ಯುವ ಸಂಘಟನೆ ಅಧ್ಯಕ್ಷ ರೇವಣ ಸಿದ್ದಪ್ಪ ಮತ್ತವರ ವಕೀಲ ಹನುಮಂತಪ್ಪ ಬಿ. ಹರವಿ ಗೌಡರ್ ಅವರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಆಕ್ಷೇಪಿಸಿ ಒ ನೀಲಪ್ಪ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು “ಪ್ರತಿಮೆ ತೆರವಿಗೆ ಸಂಬಂಧಿಸದಂತೆ ಅರ್ಜಿಯಲ್ಲಿ 10ನೇ ಪ್ರತಿವಾದಿಯಾಗಿರುವ ಸಂಘಟನೆಯ ಅಧ್ಯಕ್ಷ ರೇವಣ ಸಿದ್ದಪ್ಪ ಅಫಿಡವಿಟ್‌ ಸಲ್ಲಿಸಿದ್ದಾರೆ. ಆದರೆ, ಆ ಅಫಿಡವಿಟ್‌ನಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡಿರುವ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲ. ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಅವರು ಇಂದು ವಿಚಾರಣೆಗೆ ಹಾಜರಾಗಬೇಕಿತ್ತು” ಎಂದರು.

ಆಗ ಪೀಠವು ರೇವಣ ಸಿದ್ದಪ್ಪ ಮತ್ತವರ ವಕೀಲರ ಹೆಸರನ್ನು ಕರೆಯಿತಾದರೂ, ಯಾರೊಬ್ಬರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ, ವಿಚಾರಣೆಯನ್ನು ಒಂದು ವಾರ ಮುಂದೂಡಿದ ಪೀಠ, ಅರ್ಜಿಯ ಮುಂದಿನ ವಿಚಾರಣೆಗೆ 10ನೇ ಪ್ರತಿವಾದಿ ಮತ್ತವರ ವಕೀಲ ಹನುಮಂತಪ್ಪ ಬಿ. ಹರವಿ ಗೌಡರ್ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿರಬೇಕು. ತಪ್ಪಿದರೆ, ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಸಿ, ವಿಚಾರಣೆಯನ್ನು ಮಾರ್ಚ್‌ 24ಕ್ಕೆ ಮುಂದೂಡಿತು.

ಆದೇಶ ಪಾಲಿಸದ ಸಂಘಟನೆ

2021ರ ಆಗಸ್ಟ್‌ 13ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದ ಸಂಘಟನೆಯ ಅಧ್ಯಕ್ಷ ರೇವಣ ಸಿದ್ದಪ್ಪ, ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ನಾಲ್ಕು ತಿಂಗಳೊಳಗೆ ಪರ್ಯಾಯ ಜಾಗಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಪರಿಗಣಿಸಿದ್ದ ಪೀಠವು ಪ್ರತಿಮೆ ತೆರವುಗೊಳಿಸಿ ಡಿಸೆಂಬರ್‌ 17ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿ, ಪಿಐಎಲ್ ಇತ್ಯರ್ಥಪಡಿಸಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ನ್ಯಾಯಾಲಯಕ್ಕೆ ನೀಡಲಾಗಿದ್ದ ಭರವಸೆಯಂತೆ ಪ್ರತಿಮೆ ಸ್ಥಳಾಂತರಿಸಿಲ್ಲ. ಪ್ರತಿಮೆ ತೆರವು ವಿಚಾರದಲ್ಲಿ ಪ್ರತಿವಾದಿ ಸಂಘಟನೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದೆ ಎಂದು ಕಳೆದ ಡಿಸೆಂಬರ್‌ 20ರಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪೀಠವು ಪ್ರತಿಮೆ ತೆರವುಗೊಳಿಸುವುದಾಗಿ ಅಫಿಡವಿಟ್‌ ಸಲ್ಲಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಯುವ ಸಂಘಟನೆಯ ಅಧ್ಯಕ್ಷ ರೇವಣ ಸಿದ್ದಪ್ಪ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ಗುರುವಾರದ ವಿಚಾರಣೆಗೂ ರೇವಣ ಸಿದ್ದಪ್ಪ ಅವರಾಗಲೀ, ಅವರ ವಕೀಲರಾಗಲೀ ಹಾಜರಾಗಿರಲಿಲ್ಲ.

ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಸಾರ್ವಜನಿಕ ಸ್ಥಳದಲ್ಲಿ 2019ರ ನವೆಂಬರ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಅದಕ್ಕೆ ಆಕ್ಷೇಪಿಸಿದ್ದ ಗ್ರಾಮಸ್ಥರು ದೂರು ದಾಖಲಿಸಿದ್ದರು. ಇದನ್ನು ಆಧರಿಸಿ 2020ರ ಮಾರ್ಚ್‌ 5ರಂದು ಗ್ರಾಮ ಪಂಚಾಯಿತಿ ಗೊತ್ತುವಳಿ ಅಂಗೀಕರಿಸಿತ್ತು. ಪ್ರತಿಮೆಯ ವಿಚಾರವನ್ನು ಗೊತ್ತುವಳಿಯಲ್ಲಿ ಚರ್ಚಿಸಿ, ಅದನ್ನು ಸ್ಥಳಾಂತರಿಸುವ ಸಂಬಂಧ ದಾವಣಗೆರೆಯ ಹಿರೇಮೇಗಲಗೆರೆ ಪಿಡಿಒಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಪ್ರತಿಮೆ ತೆರವು ಮಾಡಲು ಪಿಡಿಒ ಆದೇಶಿಸಿದ್ದರು. ಪಿಡಿಒ ಆದೇಶದ ಆಧಾರದ ಮೇಲೆ ಅರ್ಜಿದಾರ ನೀಲಪ್ಪ ಮತ್ತಿತರರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2020ರ ಆಗಸ್ಟ್‌ 10ರಂದು ನ್ಯಾಯಾಲಯವು ಅನಧಿಕೃತವಾಗಿ ಪ್ರತಿಮೆ ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಉಪವಿಭಾಗಾಧಿಕಾರಿ ಪರಿಶೀಲನೆ ನಡೆಸಿ, ಅನಧಿಕೃತವಾಗಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ವರದಿ ನೀಡಿದ್ದರು.

Also Read
ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರ ಆದೇಶ ಪಾಲಿಸಲು ವಿಫಲ: ಸಂಘಟನೆಯೊಂದರ ಅಧ್ಯಕ್ಷರಿಗೆ ಹೈಕೋರ್ಟ್‌ನಿಂದ ಸಮನ್ಸ್‌

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ “ನ್ಯಾಯ ಪರಿಪಾಲನೆಯನ್ನು ಅದಮ್ಯವಾಗಿ ನಂಬಿದ್ದ, ಭಾರತ ಸಂವಿಧಾನದ ಕರ್ತೃ ಮಾತ್ರವಲ್ಲದೇ ಮಹಾನ್‌ ಮಾನವತಾವಾದಿಯಾಗಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರಿನಲ್ಲಿ ಸಂಘಟನೆಯು ಕಾನೂನುಬಾಹಿರ ಕೃತ್ಯ ಎಸಗಿದೆ” ಎಂದು ಪೀಠ ಹೇಳಿತ್ತು.

ಮಹಾನ್‌ ವ್ಯಕ್ತಿಯ ಅಪೂರ್ಣವಾದ ಪುತ್ಥಳಿ ನಿರ್ಮಿಸುವುದು ಅವರನ್ನು ಅಗೌರವಿಸುವುದಕ್ಕೆ ಸಮನಾಗಿದೆ. “ಅಂಬೇಡ್ಕರ್‌ ಹೆಸರಿನಲ್ಲಿ ಕಾನೂನುಬಾಹಿರ ಕೆಲಸ ಮಾಡುವ ಮೂಲಕ ಮಹಾನ್‌ ವ್ಯಕ್ತಿಗೆ ಯುವ ಸಂಘಟನೆ ಅಗೌರವ ತೋರಿದೆ. ಪ್ರತಿವಾದಿಗಳು ಸಾರ್ವಜನಿಕ ಸ್ಥಳದಲ್ಲಿ ಮಹಾನ್‌ ವ್ಯಕ್ತಿಯ ಅಪೂರ್ಣ ಪುತ್ಥಳಿ ನಿರ್ಮಿಸಿದ್ದಾರೆ” ಎಂದು ಪೀಠ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kannada Bar & Bench
kannada.barandbench.com