ಮಾಜಿ ಸಂಸದ ಆದಿಕೇಶವಲು ಪುತ್ರ ಆರೋಪಿಯಾಗಿರುವ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಕರ್ನಾಟಕ ಹೈಕೋರ್ಟ್‌

ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತ ಕಾರ್ಯದ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾದಾಗ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
Karnataka HC and CBI
Karnataka HC and CBI

ಮಾಜಿ ಸಂಸದ ಡಿ ಕೆ ಆದಿಕೇಶವಲು ಪುತ್ರ ಆರೋಪಿಯಾಗಿರುವ ಕೆ ರಘುನಾಥ್‌ ಅವರ ಶಂಕಿತ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಕೇಂದ್ರೀಯ ತನಿಖಾ ದಳಕ್ಕೆ ವಹಿಸಿದೆ.

ಪೊಲೀಸರು ಮತ್ತು ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಗೆ ಆಕ್ಷೇಪಿಸಿ ರಘುನಾಥ್‌ ಅವರ ಪತ್ನಿ ಎಂ ಮಂಜುಳಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

Justice M Nagaprasanna
Justice M Nagaprasanna

“ನ್ಯಾಯಯುತ ವಿಚಾರಣೆಯು ನ್ಯಾಯಯುತವಾದ ತನಿಖೆಯನ್ನು ಒಳಗೊಂಡಿರುತ್ತದೆ ಎಂಬುದು ಕಾನೂನಿನಲ್ಲಿ ಒಪ್ಪಿತ ತತ್ವವಾಗಿದ್ದು, ನ್ಯಾಯಾಂಗವು ಅದನ್ನು ಪರಿಗಣಿಸಿದೆ” ಎಂದು ಪೀಠ ಹೇಳಿದೆ.

“ಎಸ್‌ಐಟಿ ತನಿಖೆಯಲ್ಲಿನ ಲೋಪವನ್ನು ಹಿರಿಯ ವಕೀಲರು ಉಲ್ಲೇಖಿಸಿದ್ದಾರೆ. ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತ ಕಾರ್ಯದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾದಾಗ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬಹುದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ನ್ಯಾಯದಾನ ಮತ್ತು ಮಾನವ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ವಾಸ್ತವಿಕ ಅಂಶಗಳು ತನಿಖೆಯನ್ನು ಪಕ್ಷಾತೀತವಾದ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಹೇಳಿದರೆ ಅದನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಆದಿಕೇಶವಲು ಅವರ ಮಕ್ಕಳ ಜೊತೆಗಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 2019ರಲ್ಲಿ ಪತಿ ರಘುನಾಥ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಮಂಜುಳಾ ಆಪಾದಿಸಿದ್ದರು. ಮಾಜಿ ಸಂಸದ ಆದಿಕೇಶವಲು ಅವರ ಮಕ್ಕಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ಮಂಜುಳಾ ಅವರ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಹೀಗಾಗಿ, ಅವರು ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ತನಿಖೆಗೆ ಆದೇಶ ಮಾಡಿದ್ದು, ಎಫ್‌ಐಆರ್‌ ದಾಖಲಿಸಲಾಗಿತ್ತು.

Also Read
ಕೊಕೇನ್‌ ಸೇವನೆ: ಉದ್ಯಮಿ ಆದಿಕೇಶವುಲು ಪುತ್ರ ಶ್ರೀನಿವಾಸ್‌ಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು

ತನಿಖೆ ಅಪರಿಪೂರ್ಣವಾಗಿದೆ ಎಂದು ಆಕ್ಷೇಪಿಸಿ ಮಂಜುಳಾ ಮತ್ತು ಅವರ ಪುತ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ ತನಿಖೆ ನಡೆಸಲು 2021ರಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು. ಮೂರು ಸದಸ್ಯರ ಎಸ್‌ಐಟಿಯು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿತ್ತು. ಇದನ್ನು ಮ್ಯಾಜಿಸ್ಟ್ರೇಟ್‌ ತಿರಸ್ಕರಿಸಿದ್ದು, ಪುನರ್‌ ತನಿಖೆ ನಡೆಸಲು ಎಚ್‌ಎಎಲ್‌ ಪೊಲೀಸ್‌ ಠಾಣಾಧಿಕಾರಿಗೆ ಆದೇಶಿಸಿತ್ತು. ಆನಂತರ, ಅರ್ಜಿದಾರರು ತನಿಖೆಗೆ ಮಾತ್ರವೇ ಸೀಮಿತವಾಗಿ ಮ್ಯಾಜಿಸ್ಟ್ರೇಟ್‌ ಆದೇಶವನ್ನು ಪ್ರಶ್ನಿಸಿ, ಠಾಣಾಧಿಕಾರಿ ಬದಲಿಗೆ ಸಿಬಿಐ ತನಿಖೆಗೆ ಪ್ರಕರಣವಹಿಸುವಂತೆ ಕೋರಿ ಪುನಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಅರ್ಜಿದಾರರನ್ನು ಹಿರಿಯ ವಕೀಲ ಹಷ್ಮತ್‌ ಪಾಷಾ, ವಕೀಲ ನಾಸಿರ್‌ ಅಲಿ ಪ್ರತಿನಿಧಿಸಿದ್ದರು. ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ವಕೀಲೆ ಕೆ ಪಿ ಯಶೋಧಾ ವಾದಿಸಿದರು. ಆರೋಪಿಗಳನ್ನು ವಕೀಲರಾದ ಎಸ್‌ ಮಹೇಶ್‌, ಪಿ ಕೆ ಅರ್ಜುನ್‌ ಪ್ರತಿನಿಧಿಸಿದ್ದರು. ಸಿಬಿಐ ಅನ್ನು ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com