ನಾಯಕ ಜನಾಂಗದ ಉಪಪಂಗಡಗಳ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ: ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಜನರ ಹಿತಾಸಕ್ತಿ ರಕ್ಷಿಸುವ ಹೊಣೆ ಹೊತ್ತಿರುವ ಸರ್ಕಾರ ಅರ್ಜಿದಾರರು ಆರೋಪಿಸಿರುವಂತೆ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರಿಗೆ ನೋಟಿಸ್ ನೀಡಿ, ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದ ನ್ಯಾಯಾಲಯ.
Karnataka High Court
Karnataka High Court
Published on

ಪರಿಶಿಷ್ಟ ವರ್ಗಕ್ಕೆ ಬರುವ ನಾಯಕ ಜನಾಂಗದ ಉಪಪಂಡಗಳಾದ ತಳವಾರ, ಪರಿವಾರದ ಹೆಸರಿನಲ್ಲಿ ಬೆಸ್ತರ ಉಪಜಾತಿಗಳಿಗೆ ನಕಲಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಯಾದಗಿರಿಯ ರಾಜ್ಯ ಎಸ್‌ಸಿ ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ನಡೆಸಿತು.

ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡಗಳನ್ನು ಮಾತ್ರ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪಪಂಗಡದವರಿಗೂ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೆಲ ಕಾಲ ಅರ್ಜಿದಾರರ ಹಾಗೂ ಪ್ರತಿವಾದಿಗಳ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು, ಅರ್ಜಿಯಲ್ಲಿ ಉಲ್ಲೇಖಿಸಲಾದ ನಕಲಿ ಜಾತಿ ಪ್ರಮಾಣಪತ್ರಗಳು ಹಾಗೂ ಇತರೆ ಅನರ್ಹರಿಗೆ ನೀಡಿದ್ದಾರೆನ್ನಲಾದ ಜಾತಿ ಪ್ರಮಾಣಪತ್ರಗಳ ಕುರಿತು ಸಂಬಂಧಿಸಿದವರಿಗೆ ಮಾ.27ರೊಳಗೆ ನೋಟಿಸ್ ನೀಡಿ ಆದಷ್ಟು ಶೀಘ್ರ ಕ್ರಮ ಜರುಗಿಸಬೇಕು. ಆ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸರಕಾರದ ಪರ ವಿಶೇಷ ವಕೀಲರಾದ ಸಿ.ಜಗದೀಶ್‌ಗೆ ಸೂಚನೆ ನೀಡಿತು. ಪ್ರಕರಣದ ವಿಚಾರಣೆಯನ್ನು ಏ.2ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರು ಬಹಳ ಗಂಭೀರವಾದ ವಿಷಯವನ್ನು ಮುಂದಿಟ್ಟಿದ್ದಾರೆ, ಹಾಗಾಗಿ ಜನರ ಹಿತಾಸಕ್ತಿ ರಕ್ಷಿಸುವ ಹೊಣೆ ಹೊತ್ತಿರುವ ಸರಕಾರ ಅರ್ಜಿದಾರರು ಆರೋಪಿಸಿರುವಂತೆ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರಿಗೆ ನೋಟಿಸ್ ನೀಡಿ, ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ ರವಿವರ್ಮ ಕುಮಾರ್ ಅವರು, ಸಂವಿಧಾನಕ್ಕೆ ತಿದ್ದುಪಡಿ ತಂದು ನಾಯಕ ಜನಾಂಗದ ಉಪಪಂಗಡಗಳಾದ ಪರಿವಾರ ಮತ್ತು ತಳವಾರವನ್ನು ಎಸ್‌ಸಿ ವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಅಕಾರಿಗಳು ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪಪಂಗಡದವರಿಗೂ ಎಸ್‌ಟಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಹೀಗೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವ 60ಕ್ಕೂ ಹೆಚ್ಚು ಪ್ರಕರಣಗಳ ವಿವರಗಳನ್ನು ಅರ್ಜಿಯಲ್ಲಿ ಅಡಕ ಮಾಡಲಾಗಿದೆ. ಹೀಗೆ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರು ಶೈಕ್ಷಣಿಕ, ಔದ್ಯೋಗಿಕ ಲಾಭ ಪಡೆಯುತ್ತಿರುವುದಲ್ಲದೆ, ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ಎಸ್‌ಟಿಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದರಿಂದ ನಿಜಕ್ಕೂ ಮೀಸಲಿಗೆ ಅರ್ಹರು ಸರಕಾರಿ ಸೌಲಭ್ಯದಿಂದ ವಂಚಿತವಾಗುತ್ತಿರುವ ಜತೆಗೆ ಅವರಿಗೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ನ್ಯಾಯದ ಬುಡಮೇಲಿಗೆ ಇದು ಕಾರಣವಾಗಿದೆ ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ಸರಕಾರದ ವಿಶೇಷ ವಕೀಲ ಸಿ ಜಗದೀಶ್ ಅವರು, ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ದೂರು ನೀಡಿದ್ದರೆ ಆ ಬಗ್ಗೆ ಪರಿಶೀಲಿಸಿ ಅಯಾ ಜಿಲ್ಲಾಕಾರಿಗಳು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಅರ್ಜಿದಾರರು ದೂರು ನೀಡಿಲ್ಲ. ಸದ್ಯ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲಾಕಾರಿಗಳು ಕೆಲಸದ ಒತ್ತಡದಲ್ಲಿದ್ದಾರೆ. ಆದರೂ ಸಹ ಕೋರ್ಟ್ ಸೂಚನೆಯಂತೆ ನಕಲಿ ಜಾತಿ ಪ್ರಮಾಣಪತ್ರ ವಿತರಿಸಲಾಗಿದೆ ಎನ್ನುವ ಬಗ್ಗೆ ಸಂಬಂಧಿಸಿದವರಿ ನೋಟಿಸ್ ನೀಡಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸ್ವಲ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

Kannada Bar & Bench
kannada.barandbench.com