ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ನಕಲಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿರುವ ಆರೋಪ ಸಂಬಂಧ ಮಹಿಳೆಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ. ಹೀಗಾಗಿ, ಸರ್ಕಾರಿ ನೌಕರಿಯಿಂದ ವಜಾಗೊಂಡ 10 ವರ್ಷಗಳ ಬಳಿಕ ಅರ್ಜಿದಾರರು ಆರೋಪದಿಂದ ಮುಕ್ತಿ ಪಡೆದಿದ್ದಾರೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿ 64 ವರ್ಷದ ಸಾವಿತ್ರಮ್ಮ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯಲು ಮತ್ತು ಮೀಸಲು ಗಿಟ್ಟಿಸಿಕೊಳ್ಳಲು ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆಯುವ ಕ್ರಿಮಿನಲ್ ಉದ್ದೇಶವನ್ನು ಅರ್ಜಿದಾರರು ಹೊಂದಿದ್ದಂತೆ ಕಾಣುತ್ತಿಲ್ಲ. 1989ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಜಾರಿಯಾಗಿದೆ. ಅದಕ್ಕೂ ಮುನ್ನವೇ ಅರ್ಜಿದಾರರು ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗಕ್ಕೆ ಸೇರಿದ್ದಾರೆ. ಆ ವೇಳೆ ಜಾರಿಯಿಲ್ಲದ ಕಾನೂನು ಬಳಸಿ ಅವರನ್ನು ಶಿಕ್ಷಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಮದುವೆಯಾದ ಆರಂಭದಲ್ಲಿಯೇ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಹಾಗಾಗಿ ಅವರು ಮೀಸಲು ಸೌಲಭ್ಯ ಪಡೆದುಕೊಳ್ಳಲು ಮತ್ತು ಉದ್ಯೋಗಕ್ಕಾಗಿಯೇ ದುರುದ್ದೇಶದಿಂದ ಎಸ್‌ಟಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಹೇಳಲಾಗದು. ಹಾಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಮಾಡಗಿದೆ ಎಂದು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಬ್ರಾಹ್ಮಣ ಜಾತಿಗೆ ಸೇರಿದ ಅರ್ಜಿದಾರರು 1978ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದ ವ್ಯಕ್ತಿಯನ್ನು ವಿವಾಹವಾಗಿದ್ದರು. ನಂತರ ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಮೀಸಲು ಕೋಟಾದಡಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ದ್ವಿತೀಯ ದರ್ಜೆ ಸಹಾಯಕಿ ಉದ್ಯೋಗ ಪಡೆದಿದ್ದರು.
ನಂತರ ಜಾತಿ ಪ್ರಮಾಣ ಪತ್ರ ಪರಿಶೀಲನೆ ವೇಳೆ ಸಾವಿತ್ರಮ್ಮ ಮೂಲತಃ ಬ್ರಾಹ್ಮಣ ಜನಾಂಗಕ್ಕೆ ಸೇರಿದ್ದಾರೆ. ಅವರ ಎಸ್‌ಎಸ್‌ಎಲ್‌ಸಿ ದಾಖಲೆ ಈ ವಿಚಾರವನ್ನು ಸ್ಪಷ್ಟಪಡಿಸುತ್ತದೆ. ಆದರೆ, ಪತಿಯ ಜಾತಿಯ ಪ್ರಮಾಣ ಪತ್ರ ಪಡೆದು ಉದ್ಯೋಗ ಗಿಟ್ಟಿಸಿದ್ದಾರೆ ಎಂದು ಆರೋಪಿಸಿ ಎಸ್‌ಟಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿತ್ತು.
ಅಲ್ಲದೇ, ಪತಿಯ ಜಾತಿಯ ಹಕ್ಕು ಮಂಡಿಸಲಾಗದು ಮತ್ತು ಎಸ್‌ಟಿ ಪ್ರಮಾಣ ಪತ್ರ ಪಡೆಯಲಾಗದು ಎಂದು ತಿಳಿಸಿ ಅರ್ಜಿದಾರರನ್ನು ಸರ್ಕಾರಿ ನೌಕರಿಯಿಂದ ವಜಾಗೊಳಿಸಿ 2012ರ ಏಪ್ರಿಲ್ 28ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಮತ್ತೊಂದೆಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ-1989 ಸೆಕ್ಷನ್ 3(1)(9)ರಡಿ ವಂಚನೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ತುಮಕೂರಿನ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.