ನಕಲಿ ನೋಟು ಮುದ್ರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

“ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರೆಲ್ಲರ ಕೈವಾಡವಿದೆ ಎಂಬುದನ್ನು ತನಿಖಾಧಿಕಾರಿ ಪತ್ತೆ ಹಚ್ಚಬೇಕಿದೆ. ಹೀಗಾಗಿ, ಅರ್ಜಿದಾರರು ಜಾಮೀನಿಗೆ ಅರ್ಹವಾಗಿಲ್ಲ” ಎಂದು ಪೀಠವು ಹೇಳಿದೆ.
Fake currency and Karnataka HC -Dharwad bench
Fake currency and Karnataka HC -Dharwad bench

ನಕಲಿ ನೋಟುಗಳ ಮುದ್ರಣ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ವ್ಯಕ್ತಿಯೊಬ್ಬರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಇತ್ತೀಚೆಗೆ ನಿರಾಕರಿಸಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಶರಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರೆಲ್ಲರ ಕೈವಾಡವಿದೆ ಎಂಬುದನ್ನು ತನಿಖಾಧಿಕಾರಿ ಪತ್ತೆ ಹಚ್ಚಬೇಕಿದೆ. ಹೀಗಾಗಿ, ಈ ಹಂತದಲ್ಲಿ ಅರ್ಜಿದಾರರು ಜಾಮೀನಿಗೆ ಅರ್ಹವಾಗಿಲ್ಲ” ಎಂದು ಪೀಠವು ಹೇಳಿತು.

ಪ್ರಕರಣದ ಹಿನ್ನೆಲೆ: 2022ರ ಆಗಸ್ಟ್‌ 4ರ ಸಂಜೆ ದೂರುದಾರ ಪೊಲೀಸರು ಗಸ್ತಿನಲ್ಲಿದ್ದಾಗ ಧಾರವಾಡ ಜಿಲ್ಲೆಯ ಕುಂದಗೋಳದ ಮಾರ್ಕೆಟ್‌ ರಸ್ತೆಯಲ್ಲಿನ ಆದಿತ್ಯ ಮಿಲ್ಕ್‌ ಎಂಬಲ್ಲಿ ನಕಲಿ ನೋಟುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ ಕುಂದಗೋಳ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 489ಎ ಮತ್ತು ಸಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆಯ ಸಂದರ್ಭಧಲ್ಲಿ ಮೊದಲನೇ ಆರೋಪಿ ಸ್ವಯಂಪ್ರೇರಿತವಾಗಿ ನೀಡಿದ ಹೇಳಿಕೆ ಆಧರಿಸಿ ಎರಡು, ಮೂರು ಮತ್ತು ನಾಲ್ಕನೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ಮುಂದುವರಿದ ಭಾಗವಾಗಿ ನಾಲ್ಕನೇ ಆರೋಪಿ ಶರಣಪ್ಪರನ್ನು 2022ರ ಆಗಸ್ಟ್‌ 8ರಂದು ಬಂಧಿಸಲಾಗಿತ್ತು.

ನಾಲ್ಕನೇ ಆರೋಪಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಿಲ್ಲ, ಅಲ್ಲದೆ ಮೊದಲ ಆರೋಪಿಯ ಸ್ವಯಂ ಪ್ರೇರಿತ ಹೇಳಿಕೆಯ ಆಧಾರದಲ್ಲಿ ಮಾತ್ರವೇ ಆತನನ್ನು ಬಂಧಿಸಲಾಗಿದೆ. ಪೊಲೀಸರು ಆತನ ಮನೆಯಿಂದ ಕಲರ್‌ ಪ್ರಿಂಟರ್ ಹಾಗೂ ಇತರ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದು, ಕೇವಲ ಕಲರ್‌ ಪ್ರಿಂಟರ್‌ನಿಂದ ನೂಟು ಮುದ್ರಣ ಸಾಧ್ಯವಿಲ್ಲ. ಆರೋಪಿಯು ಆಗಸ್ಟ್ 8, 2022ರಿಂದ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನು ನೀಡಬೇಕು ಎಂದು ಆರೋಪಿ ಪರ ವಕೀಲರು ಕೋರಿದ್ದರು.

ಇತ್ತ ಸರ್ಕಾರದ ಪರ ವಕೀಲರು, ಆರೋಪಿಯ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಬಹುದಾದಂತಹ ಗಂಭೀರ ಆಪಾದನೆ ಇದೆ. ಆತನ ಹೇಳಿಕೆಯ ಹಿನ್ನೆಲೆಯಲ್ಲಿ ಆತನ ಮನೆಯಿಂದ ಕಲರ್‌ ಪ್ರಿಂಟರ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಗುರುತರ ಆರೋಪ ಇರುವ ಹಿನ್ನೆಲೆಯಲ್ಲಿ ಆರೋಪಿಗೆ ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಯನ್ನು ಅಡ್ಡಿಪಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಜಾಮೀನು ನೀಡಬಾರದು ಎಂದು ವಾದಿಸಿದ್ದರು.

ತನಿಖೆಯು ಇನ್ನೂ ಪ್ರಗತಿಯಲ್ಲಿದ್ದು ಪ್ರಕರಣದಲ್ಲಿ ಇತರೆ ಅರೋಪಿಗಳು ಇರುವ ಸಾಧ್ಯತೆಯನ್ನು ತಳ್ಳಿಹಾಕದು ಎನ್ನುವುದನ್ನು ಗಮನಿಸಿದ ನ್ಯಾಯಾಲಯವು ಆರೋಪಿಗೆ ಈ ಹಂತದಲ್ಲಿ ಜಾಮೀನು ನೀಡಲು ತಿರಸ್ಕರಿಸಿ ಮನವಿ ವಜಾಗೊಳಿಸಿತು.

ಜಾಮೀನು ಕೋರಿ ಶರಣಪ್ಪ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ವಿಚಾರಣಾಧೀನ ನ್ಯಾಯಾಲಯವು ಸೆಪ್ಟೆಂಬರ್‌ 2ರಂದು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com