ಖೋಟಾ ನೋಟು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ; ಪ್ರಕರಣಗಳನ್ನು ನಿಷ್ಠುರವಾಗಿ ಎದುರಿಸಬೇಕು: ದೆಹಲಿ ಹೈಕೋರ್ಟ್

ಒಟ್ಟು ₹ 3 ಲಕ್ಷ ಮೌಲ್ಯದ ₹ 2,000 ಮುಖಬೆಲೆಯ ನಕಲಿ ನೋಟುಗಳನ್ನು ಹೊಂದಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಖೋಟಾ ನೋಟು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ; ಪ್ರಕರಣಗಳನ್ನು ನಿಷ್ಠುರವಾಗಿ ಎದುರಿಸಬೇಕು: ದೆಹಲಿ ಹೈಕೋರ್ಟ್

ತನ್ನ ಮನೆಯಲ್ಲಿ  ₹ 3 ಲಕ್ಷ ಮೌಲ್ಯದ ₹ 2,000 ಮುಖಬೆಲೆಯ ಖೋಟಾ ನೋಟುಗಳನ್ನು ಹೊಂದಿದ್ದ ಆರೋಪಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ [ಇರ್ಷಾದ್‌ ಅಲಿಯಾಸ್‌ ಭುರು ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಖೋಟಾ ನೋಟು ಚಲಾವಣೆಯು ದೇಶದ ಆರ್ಥಿಕತೆ, ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತದೆ ಎಂದ ನ್ಯಾ. ಸ್ವರಣಾ ಕಾಂತ ಶರ್ಮಾ ಅವರು ಇರ್ಷಾದ್ ಅಲಿಯಾಸ್ ಭುರು ಎಂಬ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದರು.

ಇಂತಹ ಪ್ರಕರಣಗಳನ್ನು ನ್ಯಾಯಾಲಯಗಳು ನಿಷ್ಠುರವಾಗಿ ವ್ಯವಹರಿಸುವುದು ಅತ್ಯಗತ್ಯ ಎಂದು ಪೀಠ ಹೇಳಿತು. "ನಕಲಿ ನೋಟುಗಳ ವಿತರಣೆ ಮತ್ತು ಚಲಾವಣೆಗೆ ಸಂಬಂಧಿಸಿದಂತೆ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪ್ರಸ್ತುತ ಪ್ರಕರಣ ಗಂಭೀರ ಕಳವಳ ಉಂಟುಮಾಡುತ್ತದೆ. ಖೋಟಾ ನೋಟುಗಳ ಪೂರೈಕೆ ಮತ್ತು ಚಲಾವಣೆ ಸುತ್ತಲಿನ ಅಕ್ರಮ ಚಟುವಟಿಕೆಗಳು ಆರ್ಥಿಕತೆ ಮತ್ತು ಸಮಾಜದೊಳಗಿನ ವ್ಯಕ್ತಿಗಳಿಗೆ ಅನೇಕ ಸ್ತರಗಳಲ್ಲಿ ಅಪಾಯಗಳನ್ನುಂಟುಮಾಡುತ್ತವೆ, ”ಎಂದು ನ್ಯಾಯಾಲಯ ಹೇಳಿತು.

ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಸಂಘಟಿತ ಅಪರಾಧ ಸೇರಿದಂತೆ ವಿವಿಧ ರೀತಿಯ ಅಕ್ರಮ ಚಟುವಟಿಕೆಗಳನ್ನು ಖೋಟಾ ನೋಟುಗಳ ಪ್ರಸರಣ ಸುಗಮಗೊಳಿಸುತ್ತದೆ.  ಕ್ರಿಮಿನಲ್ ಕೂಟಗಳು ಹೆಚ್ಚಾಗಿ ನಕಲಿ ಹಣ ಬಳಸುತ್ತವೆ ಎಂದು ಅದು ಹೇಳಿದೆ.

ಅರಿವಿಲ್ಲದೆ ಖೋಟಾ ನೋಟು ಪಡೆದವರು ಗಂಭಿರ ಅಪಾಯಗಳು, ಹಣಕಾಸು ಸಂಕಷ್ಟ, ಕಾನೂನು ಪ್ರಕ್ರಿಯೆಗಳಿಗೆ ಸಿಲುಕುತ್ತಾರೆ. ಅಲ್ಲದೆ, ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳುತ್ತಾರೆ ಎಂದು ನ್ಯಾಯಾಲಯ ನುಡಿಯಿತು.

ಆರೋಪಿಯನ್ನು ಜೂನ್ 22, 2023ರಂದು ಕೈರಾನಾ ಉತ್ತರ ಪ್ರದೇಶದ ಆತನ ಮನೆಯಿಂದ ಬಂಧಿಸಲಾಗಿತ್ತು.

ಪೊಲೀಸರ ಪ್ರಕಾರ, ಆರೋಪಿಯ ಮನೆಯಿಂದ ₹ 3 ಲಕ್ಷ ಮೌಲ್ಯದ  ₹ 2,000 ಮುಖಬೆಲೆಯ150 ನಕಲಿ  ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದ್ದು ಪೊಲೀಸರು ತನ್ನ ಮನೆಯಲ್ಲಿ ಕರೆನ್ಸಿ ನೋಟು ಎಸೆದಿದ್ದಾರೆ ಎಂದು ಆರೋಪಿ ವಾದಿಸಿದ್ದ. ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com