ಶಿಥಿಲಾವಸ್ಥೆ ಕಟ್ಟಡದಲ್ಲಿ ಫಲುಡಾ, ಐಸ್‌ಕ್ರೀಂ ತಯಾರಿಕೆ: ಆಹಾರ ಸುರಕ್ಷತಾ ಪ್ರಾಧಿಕಾರ, ಬಿಬಿಎಂಪಿಗೆ ನೋಟಿಸ್‌

ಶುಚಿತ್ವ ಪಾಲಿಸದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಆಹಾರ ತಯಾರಿಕೆ ಘಟಕದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಪ್ರತಿವಾದಿಗಳಿಗೆ ನೀರ್ದೆಶಿಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Karnataka High Court
Karnataka High Court

ಬೆಂಗಳೂರಿನ ಶೇಷಾದ್ರಿಪುರಂನ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಖಾಸಗಿ ವ್ಯಕ್ತಿಗಳು ಫಲುಡಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹಾಗೂ ಬಿವಿಎಂಪಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಶುಚಿತ್ವ ಪಾಲಿಸದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಆಹಾರ ತಯಾರಿಕೆ ಘಟಕದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಪ್ರತಿವಾದಿಗಳಿಗೆ ನೀರ್ದೆಶಿಬೇಕು ಎಂದು ಕೋರಿ ವಕೀಲ ಎನ್‌ ಪಿ ಅಮೃತೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ವಿಚಾರಣೆ ವೇಳೆ, ಪ್ರತಿವಾದಿಗಳ ಪರ ವಕೀಲರು ವಕಾಲತ್ ಸಲ್ಲಿಸಲು ಕಾಲವಕಾಶಕ್ಕಾಗಿ ಮನವಿ ಮಾಡಿದರು, ಇದನ್ನು ಪರಿಗಣಿಸಿದ ಪೀಠವು ವಿಚಾರಣೆ ಮುಂದೂಡಿತು.

ಬೆಂಗಳೂರಿನ ಶೇಷಾದ್ರಿಪುರಂನ ರಾಜಕಾಲುವೆ ಬಳಿ ಪಾಳು ಬಿದ್ದ ಕಟ್ಟಡದಲ್ಲಿ ಫಲುಡಾ, ಐಸ್ ಕ್ರೀಂ, ಬಾದಾಮ್ ಹಾಲು ಹಾಗೂ ಇತರೆ ಪಾನಿಯಾಗಳನ್ನು ತಯಾರಿಸಿ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ತಯಾರಿಕಾ ಘಟಕದಲ್ಲಿ ಜನರು ತ್ಯಾಜ್ಯ ಹಾಕುತ್ತಾರೆ. ಇದರ ನಡುವೆ ಆಹಾರ ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಗುತ್ತಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡ ಅನುಸರಿಲಾಗುತ್ತಿಲ್ಲ. ಹೀಗಾಗಿ, ಪ್ರತಿವಾದಿಗಳಿಗೆ ಕ್ರಮವಹಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com