ಮತದಾರರಿಗೆ ಸಿಎಂ ಯಾವತ್ತು, ಎಲ್ಲಿ, ಏನು ಆಮಿಷ ಒಡ್ಡಿದರು ಎಂಬುದಕ್ಕೆ ಸಾಕ್ಷ್ಯ ನೀಡಿಲ್ಲ: ರವಿವರ್ಮ ಕುಮಾರ್‌ ಆಕ್ಷೇಪ

ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಿರುವ ಚುನಾವಣಾ ಅಕ್ರಮಗಳ ಕುರಿತಾದ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ಮುಂದೂಡಿದ ನ್ಯಾಯಾಲಯ.
CM Siddaramaiah
CM Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಯಾವತ್ತು, ಎಲ್ಲಿ, ಏನು ಆಮಿಷ ಒಡ್ಡಿದರು ಎಂಬುದಕ್ಕೆ ಸಾಕ್ಷ್ಯವನ್ನೇ ಒದಗಿಸದೇ ಸುಳ್ಳು ಆರೋಪ ಹೊರಿಸಿ ಅವರನ್ನು ಅನರ್ಹಗೊಳಿಸಲು ಕೋರಲಾಗಿದೆ ಎಂದು ಸಿದ್ದರಾಮಯ್ಯ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.

ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಿರುವ ಚುನಾವಣಾ ಅಕ್ರಮಗಳ ಕುರಿತಾದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿದ್ದರಾಮಯ್ಯ ಪರ ವಾದ ಮುಂದುವರಿಸಿದ ಹಿರಿಯ ವಕೀಲ ಕೆ ರವಿಮರ್ವ ಕುಮಾರ್ ಅವರು ದಾವೆಯ ಪ್ರಮುಖ ಖಂಡಿಕೆಗಳನ್ನು ಓದುವ ಮೂಲಕ ಅದರಲ್ಲಿನ ಆರೋಪಗಳು ಆಧಾರರಹಿತ ಎಂದು ಬಲವಾಗಿ ಪ್ರತಿಪಾದಿಸಿದರು.

ಒಂದು ಹಂತದಲ್ಲಿ ರವಿವರ್ಮ ಕುಮಾರ್‌ ಅವರು ದಾವೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರನ್ನು ಗೀತಾ ಶರ್ಮಾ ಎಂದು ಬರೆಯಲಾಗಿದೆ. ನೀವೂ (ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಕುರಿತು) ಒಬ್ಬ ಹೆಣ್ಣಾಗಿ ಈ ರೀತಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವಂತಹ ಉನ್ನತ ಅಧಿಕಾರಸ್ಥ ಮಹಿಳೆಯೊಬ್ಬರ ಹೆಸರನ್ನು ತಪ್ಪಾಗಿ ಬರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರಮೀಳಾ ನೇಸರ್ಗಿ ಅವರು ಮೊದಲನೆಯದಾಗಿ ತಾವು ದಾವೆಯನ್ನು ಇಷ್ಟೊಂದು ವಿಶದವಾಗಿ ಪೀಠದ ಮುಂದೆ ಓದುವ ಅವಶ್ಯಕತೆಯೇ ಇಲ್ಲ. ಆದಾಗ್ಯೂ, ಬೆರಳಚ್ಚು ದೋಷವಾಗಿರಬಹುದು. ಶರ್ಮಾ ಎಂದಿದೆಯಲ್ಲಾ ಸಾಕು ಅರ್ಥವಾಗುತ್ತೆ, ನಿಮ್ಮ ವಾದ ಮುಂದುವರಿಸಿ ಎಂದು ಸಮಜಾಯಿಷಿ ನೀಡಿದರು.

Also Read
ಗ್ಯಾರಂಟಿ ಯೋಜನೆ ಪಕ್ಷದವು; ಅವುಗಳಿಗೆ ಸಿಎಂ ವೈಯಕ್ತಿಕ ಆದಾಯ ಬಳಸಿಲ್ಲ: ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ವಾದ

ಆದರೆ, ಇಷ್ಟಕ್ಕೆ ಸುಮ್ಮನಾಗದ ಪ್ರೊ. ರವಿವರ್ಮ ಕುಮಾರ್ ಅವರು ನೀವು ದಾವೆಯಲ್ಲಿ ಹೆಸರನ್ನೇ ಸರಿಯಾಗಿ ಬರೆದಿಲ್ಲ ಎಂದರೆ ನನಗೆ ಹೇಗೆ ಗೊತ್ತಾಗಬೇಕು. ಇಡೀ ದಾವೆಯ ತುಂಬಾ ಇಂತಹುದೇ ಹತ್ತಾರು ದೋಷಗಳು, ತಪ್ಪು ತಪ್ಪಾದ ಆಧಾರರಹಿತ ಆರೋಪ ತುಂಬಿವೆ ಎಂದರು. ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ಮುಂದೂಡಲಾಯಿತು.

Related Stories

No stories found.
Kannada Bar & Bench
kannada.barandbench.com