ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್ 123(4)ರ ಅಡಿ ಚುನಾವಣಾ ಅಭ್ಯರ್ಥಿಯ ಸುಳ್ಳು ಶೈಕ್ಷಣಿಕ ಮಾಹಿತಿ: ದೆಹಲಿ ಹೈಕೋರ್ಟ್

ಫೆಬ್ರವರಿ 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕರೋಲ್ ಬಾಗ್ ಕ್ಷೇತ್ರದಿಂದ ಎಎಪಿಯ ವಿಶೇಷ್ ರವಿ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ ಚುನಾವಣಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Delhi High Court

Delhi High Court

Published on

ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ತಪ್ಪು ಮಾಹಿತಿ ನೀಡಿದ್ದರೆ ಅದನ್ನು 1951ರ ಪ್ರಜಾಪ್ರತಿನಿಧಿ ಕಾಯಿದೆ ವ್ಯಾಪ್ತಿಗೆ ತರಬಹುದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [ಯೋಗೇಂದ್ರ ಚಂದೋಲಿಯಾ ಮತ್ತು ವಿಶೇಷ್ ರವಿ ಇನ್ನಿತರರ ನಡುವಣ ಪ್ರಕರಣ].

ಕಾಯಿದೆಯ ಸೆಕ್ಷನ್ 123 (4) ಅಭ್ಯರ್ಥಿಯ ಸುಳ್ಳು ಮಾಹಿತಿ ಘೋಷಣೆ ಕುರಿತಾಗಿದ್ದು ಅದರಲ್ಲಿ ವ್ಯಾಖ್ಯಾನಿಸಿರುವ "ಅಭ್ಯರ್ಥಿತನಕ್ಕೆ ಸಂಬಂಧಿಸಿದಂತೆ" ಎಂಬುದು ನ್ಯಾಯಾಲಯದ ದೃಷ್ಟಿಯಲ್ಲಿ ಅಭ್ಯರ್ಥಿಯ ಶೈಕ್ಷ ಣಿಕ ಅರ್ಹತೆ ಬಗೆಗಿನ ಮಾಹಿತಿಯನ್ನು ಒಳಗೊಂಡಿರಬೇಕು. ಏಕೆಂದರೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ಮತದಾರರಿಗೆ ಇದೆ ಎಂದು ಸುಪ್ರೀಂಕೋರ್ಟ್ ನಿರ್ವಿವಾದವಾಗಿ ಹೇಳಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ತಪ್ಪು ಮಾಹಿತಿ ನೀಡಿದ್ದರೆ ಅದನ್ನು 1951ರ ಕಾಯಿದೆಯ ಸೆಕ್ಷನ್ 123 (4) ರ ಅಡಿ ತರಬಹುದು ಎಂದು ನ್ಯಾ. ರಾಜೀವ್ ಶಕ್ಧರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಫೆಬ್ರವರಿ 2020ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕರೋಲ್ ಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿಯ ವಿಶೇಷ್ ರವಿ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ನಾಯಕ ಯೋಗೇಂದ್ರ ಚಂದೋಲಿಯಾ ಅವರು ಸಲ್ಲಿಸಿದ ಚುನಾವಣಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರವಿ ಅವರು ತಮ್ಮ ಶಿಕ್ಷಣ ಅರ್ಹತೆಗೆ ಸಂಬಂಧಿಸಿದಂತೆ ನಮೂನೆ 26 ರಲ್ಲಿ ತಪ್ಪು ಮಾಹಿತಿ ಒದಗಿಸಿರುವುದರಿಂದ ಅವರ ಉಮೇದುವಾರಿಕೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಬೇಕು. ಅಲ್ಲದೆ ಅವರು ತಮ್ಮ ವಿರುದ್ಧದ ಎಫ್‌ಐಆರ್‌ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇತ್ತ ರವಿ ಅವರು ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ಇಡಿಯಾಗಿ ಓದಿದರೆ ಅದು ಯಾವುದೇ ಕ್ರಿಯಾ ಕಾರಣವನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ವಿಚಾರಣೆ ನಡೆಸದೆ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿದ್ದರು.

Also Read
ಎನ್‌ಆರ್‌ಐ ಕೂಡ ದೇಶದ ಪ್ರಧಾನಿಯಾಗಬಹುದು: ಪ್ರಜಾ ಪ್ರತಿನಿಧಿ ಕಾಯಿದೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾ ಶಕ್ಧರ್ ಅವರು ಕಾನೂನಿನ ಪ್ರಕಾರ, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಅವರ ವಿದ್ಯಾರ್ಹತೆಯನ್ನು ಹಾಗೂ ತಮಗೆ ವಿಧಿಸಲಾದ ದಂಡ, ಸೆರೆವಾಸ, ಖುಲಾಸೆ ಮತ್ತು ಬಿಡುಗಡೆಯ ಮಾಹಿತಿ ಒಳಗೊಂಡ ಹಿಂದಿನ ಅಪರಾಧದ ವಿವರಣೆಯನ್ನು ನೀಡಬೇಕಾಗುತ್ತದೆ ಎಂದರು.

ರವಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಿಚಾರ ಮುಚ್ಚಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನ್ಯಾಯಾಲಯ ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ಅದು ಬಾಕಿ ಉಳಿದ ಕ್ರಿಮಿನಲ್‌ ಮೊಕದ್ದಮೆ ಅಡಿ ಬರುವುದಿಲ್ಲವಾದರೂ ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ತಾನು ತನ್ನ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದ್ದೇನೆ ಎಂಬುದನ್ನು ಸಮರ್ಥಿಸಿಕೊಳ್ಳಲು ಸಹಾಯ ಮಾಡುವುದಿಲ್ಲ ಎಂದಿತು.

ಮೇ 2002ರ ಹತ್ತನೇ ತರಗತಿಯ ಶೈಕ್ಷಣಿಕ ಪರೀಕ್ಷೆಯ ಫಲಿತಾಂಶವು ಅರ್ಜಿಯಲ್ಲಿ ವಾದಿಸಿದಂತೆ ಇಲ್ಲ ಎಂಬ ಮಾತ್ರಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗದು. ಅಲ್ಲದೆ ವಾದಗಳನ್ನು ಸಂಪೂರ್ಣವಾಗಿ ಓದಬೇಕು ಮತ್ತು ಪ್ರಕರಣದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ಶಕ್ಧರ್ ಹೇಳಿದರು.

ಈ ಅವಲೋಕನಗಳೊಂದಿಗೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸದೆ ವಜಾಗೊಳಿಸಿತು. ಇನ್ನು 15 ದಿನಗಳೊಳಗೆ ನಿಗದಿತ ನಮೂನೆಯಲ್ಲಿ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ಪೀಠ ಫೆಬ್ರವರಿ 25, 2022ರಂದು ವಿವಾದಾಂಶಗಳನ್ನು ರೂಪಿಸುವುದಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಲು ಸೂಚಿಸಿತು.

Kannada Bar & Bench
kannada.barandbench.com