ಸುಳ್ಳು ಅಫಿಡವಿಟ್‌: ಶಾಸಕ ಉದಯ್‌ ಗರುಡಾಚಾರ್‌ಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ; ಜಾಮೀನು ಮಂಜೂರು

ಆದೇಶ ಪ್ರಕಟವಾಗುತ್ತಿದ್ದಂತೆ ಉದಯ್‌ ಗರುಡಾಚಾರ್‌ ಅವರು ಜಾಮೀನು ಮನವಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯವು ಪುರಸ್ಕರಿಸಿದೆ.
BJP MLA Uday Garudachar
BJP MLA Uday Garudachar

ಸುಳ್ಳು ಚುನಾವಣಾ ಅಫಿಡವಿಟ್‌ ಸಲ್ಲಿಸಿದ ಪ್ರಕರಣದಲ್ಲಿ ಬಿಜೆಪಿಯ ಚಿಕ್ಕಪೇಟೆ ಶಾಸಕ ಬಿ ಜಿ ಉದಯ್‌ ಅಲಿಯಾಸ್‌ ಉದಯ್‌ ಗರುಡಾಚಾರ್‌ ಅವರನ್ನು ಅಪರಾಧಿ ಎಂದು ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಘೋಷಿಸಿದ್ದು, ಎರಡು ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ ಎಚ್‌ ಜಿ ಪ್ರಶಾಂತ್‌ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಮಾಜಿ-ಹಾಲಿ ಶಾಸಕ/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಆದೇಶ ಮಾಡಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 255(2) ಅಡಿ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125-ಎ ಅಡಿಯಲ್ಲಿನ ಅಪರಾಧಗಳಿಗೆ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಆರೋಪಿಗೆ ಎರಡು ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ 15 ದಿನ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರಕಾಶ್‌ ಶೆಟ್ಟಿ ಎಂಬವರು ಶಾಸಕ ಉದಯ್‌ ಗರುಡಾಚಾರ್‌ ವಿರುದ್ಧ ಅಶೋಕ್‌ ನಗರ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದು, ಅದು 63ನೇ ಹೆಚ್ಚುಚರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಕುರಿತು ಆರೋಪಿಯು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ. ಚುನಾವಣಾ ಅಫಿಡವಿಟ್‌ ಸಲ್ಲಿಸುವ ದಿನಕ್ಕೆ ಅನುಗುಣವಾಗಿ ಪತ್ನಿಯ ಹೆಸರಿನ ಬ್ಯಾಂಕ್‌ ಖಾತೆಯಲ್ಲಿನ ಬಾಕಿಯ ವಾಸ್ತವಿಕ ಮಾಹಿತಿಯನ್ನು ನೀಡಿಲ್ಲ.

ಮಾವರಿಕ್‌ ಹೋಲ್ಡಿಂಗ್ಸ್‌ ಅಂಡ್‌ ಇನ್‌ವೆಸ್ಟ್‌ಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಇತರೆ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವುದಾಗಿ ಆರೋಪಿ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ. ಆದರೆ, ಆರೋಪಿ ಗರುಡಾಚಾರ್‌ ಅವರು ಮಾವರಿಕ್‌ ಹೋಲ್ಡಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆರೋಪಿಯನ್ನು ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ನಿಂದ (ಆರ್‌ಓಸಿ) ಅನರ್ಹಗೊಳಿಸಲಾಗಿದೆ. ಅದನ್ನೂ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿಗೆ 2019ರ ಡಿಸೆಂಬರ್‌ 19ರಂದು ದೂರು ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಧಿಕಾರಿಯು ಅಫಿಡವಿಟ್‌ ಸುಳ್ಳನಿಂದ ಕೂಡಿದರೆ ಅದನ್ನು ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಅನುಮೋದನೆ ನೀಡಿದ್ದಾರೆ. ಅಫಿಡವಿಟ್‌ನಲ್ಲಿರುವ ಮಾಹಿತಿ ಸುಳ್ಳು ಎಂದು ತಿಳಿದೂ ಉದಯ್‌ ಗರುಡಾಚಾರ್‌ ಅವರು ಚುನಾವಣಾಧಿಕಾರಿಗೆ ಸುಳ್ಳು ಅಫಿಡವಿಟ್‌ ಸಲ್ಲಿಸಿದ್ದಾರೆ. ಆ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125ಎ ಅಡಿ ಅಪರಾಧ ಎಸಗಿದ್ದಾರೆ ಎಂದು ದೂರು ಆರೋಪಿಸಲಾಗಿತ್ತು.

ಜಾಮೀನು ಮಂಜೂರು: ಆದೇಶ ಪ್ರಕಟವಾಗುತ್ತಿದ್ದಂತೆ ಉದಯ್‌ ಗರುಡಾಚಾರ್‌ ಅವರು ಜಾಮೀನು ಮನವಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯವು ಪುರಸ್ಕರಿಸಿದೆ. ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌, ಭದ್ರತೆ ಒದಗಿಸಲು ಆದೇಶಿಸಿ, ಜಾಮೀನು ಮಂಜೂರು ಮಾಡಿತು.

Related Stories

No stories found.
Kannada Bar & Bench
kannada.barandbench.com