ಸುಳ್ಳು ವೈದ್ಯಕೀಯ ವರದಿ: ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಸುಳ್ಳು ವೈದ್ಯಕೀಯ ವರದಿ ನೀಡಿರುವ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯ ಡಾ.ಪ್ರವೀಣ್ ಮತ್ತು ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
Karnataka High Court and doctor
Karnataka High Court and doctor
Published on

ಹಲ್ಲೆ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಉಂಟಾದ ಗಾಯದ ಬಗ್ಗೆ ವಿಭಿನ್ನ ಹಾಗೂ ಸುಳ್ಳು ವೈದ್ಯಕೀಯ ವರದಿ ನೀಡಿದ್ದ ಆರೋಪದಡಿ ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಭದ್ರಾವತಿಯ ಮಂಜುನಾಥ್‌ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ದಾವಣಗೆರೆ ವಕೀಲ ಎಚ್‌ ವಿ ರಾಮದಾಸ್‌ ಸೇರಿದಂತೆ ಆರು ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

“ಇಂತಹ ಬೆಳವಣಿಗೆಯನ್ನು ಪರಿಶೀಲನೆಗೆ ಒಳಪಡಿಸದೆ ಹೋದರೆ ಅಪ್ರಾಮಾಣಿಕ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬಿದಂತಾಗುತ್ತದೆ. ಆದ್ದರಿಂದ, ಪ್ರಕರಣದಲ್ಲಿ ಸುಳ್ಳು ವೈದ್ಯಕೀಯ ವರದಿ ನೀಡಿರುವ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯ ಡಾ.ಪ್ರವೀಣ್ ಮತ್ತು ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ವಿರುದ್ಧ ಇಲಾಖಾ ತನಿಖೆ ನಡೆಸಬೇಕು” ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಶಿವಮೊಗ್ಗದ ಭದ್ರಾವತಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ಡಾ. ಜೆ ಎಂ ಪ್ರೀತಿ ಅವರು 12 ಗಂಟೆಯ ಮುನ್ನ ದೂರುದಾರ ಮಂಜುನಾಥ್ ಅವರನ್ನು ಪರಿಶೀಲಿಸಿ ಅವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ ಎಂದು ವರದಿ ನೀಡಿದ್ದಾರೆ. ಆದರೆ, 12 ಗಂಟೆಗಳ ಬಳಿಕ ಚಿಗಟೇರಿ ಆಸ್ಪತ್ರೆಯ ವೈದ್ಯರು ತದ್ವಿರುದ್ದ ವರದಿ ನೀಡಿದ್ದಾರೆ. ಹೀಗಾಗಿ, ಇಲಾಖಾ ತನಿಖೆ ನಡೆಯಬೇಕು ಎಂದು ಆದೇಶಿಸಿ, ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಭದ್ರಾವತಿಯ ನಿವಾಸಿ ಮಂಜುನಾಥ್ ಮತ್ತು ಅವರ ಪತ್ನಿ ನಡುವೆ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಲ್ಲಿ ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದವು. ಈ ನಡುವೆ 2023ರ ಏಪ್ರಿಲ್ 13ರಂದು ಮಂಜುನಾಥ್‌ ಮೇಲೆ ಅವರ ಪತ್ನಿಯ ಪರವಾಗಿ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿದ್ದ ಆರು ಮಂದಿ ವಕೀಲರು ಹಲ್ಲೆ ನಡೆಸಿದ್ದ ಆರೋಪವಿತ್ತು.

ಹಲ್ಲೆ ನಡೆದ ಬಳಿಕ ಮಂಜುನಾಥ್ ಭದ್ರಾವತಿಯಲ್ಲಿ ಜನರಲ್ ಆಸ್ಪತ್ರೆಯ ಡಾ. ಪ್ರೀತಿ ಅವರಿಂದ ಚಿಕಿತ್ಸೆ ಪಡೆದು ಗಾಯದ ಕುರಿತು ವರದಿ ನೀಡಿದ್ದರು. ಈ ವರದಿಗೆ ತೃಪ್ತರಾಗದ ಮಂಜುನಾಥ್ ದಾವಣಗೆರೆಗೆ ತೆರಳಿ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯರಾದ ಡಾ.ಪ್ರವೀಣ್ ಮತ್ತು ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ಅವರಲ್ಲಿ ಚಿಕಿತ್ಸೆ ಪಡೆದು ಮತ್ತೊಂದು ವೈದ್ಯಕೀಯ ವರದಿಯನ್ನು ಪಡೆದುಕೊಂಡಿದ್ದರು. ಅದರ ಆಧಾರದಲ್ಲಿ ದಾವಣಗೆರೆ ಎಕ್ಸ್‌ಟೆನ್ಷನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣ ಪ್ರಶ್ನಿಸಿ ಹಲ್ಲೆ ನಡೆಸಿದ ಆರೋಪ ಹೊತ್ತ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ಪೀಠವು ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿತ್ತು. ಮಂಜುನಾಥ್‌ಗೆ ಎರಡು ರೀತಿಯ ಗಾಯದ ಪ್ರಮಾಣ ಪತ್ರ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸುವುದಕ್ಕೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com