ಮೃತ ವಂಶಸ್ಥರು ವಾಸ ಮಾಡಿದ್ದ ಸ್ಥಳ ಹಾಗೂ ಜೀವಂತವಾಗಿರುವ ಕುಟುಂಬದ ಸದಸ್ಯರು ವಾಸ ಮಾಡುತ್ತಿರುವ ಸ್ಥಳಗಳ ಭಿನ್ನತೆಯ ಆಧಾರದಲ್ಲಿ ಕಂದಾಯ ಅಧಿಕಾರಿಗಳು ವಂಶವೃಕ್ಷದ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಸಮರ್ಥನೀಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಕುಟುಂಬ ಸದಸ್ಯರ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಲು ನಿರಾಕರಿಸಿದ್ದ ಬೆಂಗಳೂರು ನಗರ ದಕ್ಷಿಣ ತಾಲ್ಲೂಕಿನ ತಾವರೆಕೆರೆ ಉಪ ವಲಯದ ತಹಶೀಲ್ದಾರ್ ಮತ್ತು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಬಿ ಎಸ್ ಅಭಿನಂದನ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಕೆಲವರು ತಹಶೀಲ್ದಾರ್ ಅವರ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿಲ್ಲ ಎಂಬ ಕಾರಣ ನೀಡಿ ಅಭಿನಂದನ್ ಅವರ ‘ಸಕಾಲ ಮೇಲ್ಮನವಿ’ಯನ್ನು ತಿರಸ್ಕರಿಸಿದ್ದ 2021ರ ಡಿಸೆಂಬರ್ 27ರ ಆದೇಶವನ್ನು ಪೀಠ ರದ್ದುಪಡಿಸಿದೆ.
ಕರ್ನಾಟಕ ಸಕಾಲ ಸೇವೆಗಳ ಕಾಯಿದೆ-2011ರಲ್ಲಿ ಕಂದಾಯ ಇಲಾಖೆ ಶೀರ್ಷಿಕೆಯಡಿಯ ಕ್ರಮ ಸಂಖ್ಯೆ 16ರಲ್ಲಿ ಉಲ್ಲೇಖಿಸಿರುವಂತೆ ಬದುಕುಳಿದ ಕುಟುಂಬದ ಸದಸ್ಯರ ಪ್ರಮಾಣ ಪತ್ರ ವಿತರಿಸಲು ತಹಶೀಲ್ದಾರ್ ಸಕ್ಷಮ ಅಧಿಕಾರಿಯಾಗಿದ್ದಾರೆ ಎಂಬುದನ್ನು ಪೀಠ ಸ್ಪಷ್ಟಪಡಿಸಿದೆ.
ಕಾನೂನುಬದ್ಧ ಉತ್ತರಾಧಿಕಾರ ಅಥವಾ ಕಾನೂನು ಪ್ರತಿನಿಧಿಗಳ ಸ್ಥಿತಿಗೆ ಸಂಬಂಧಿಸಿದ ಯಾವುದೇ ವಿವಾದವನ್ನು ಸಾಕ್ಷ್ಯಗಳನ್ನು ನಿಯಂತ್ರಿಸುವ ಕಾನೂನುಗಳಿಗೆ ಒಳಪಟ್ಟ ಸಮರ್ಥ ಸಿವಿಲ್ ನ್ಯಾಯಾಲಯ ಮಾತ್ರವೇ ನಿರ್ಣಯಿಸಬೇಕು ಎಂದು ವಿವರಿಸಿದೆ.
ವಂಶವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣಪತ್ರ ನೀಡಲು, ಸಂಬಂಧಪಟ್ಟ ಕಂದಾಯ ಅಧಿಕಾರಿಯ ತಹಶೀಲ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮೃತ ಪೂರ್ವಜರು ಅಥವಾ ಕುಟುಂಬದ ಸದಸ್ಯರ ವಂಶಸ್ಥರು ಅಥವಾ ಅಗತ್ಯ ದಾಖಲೆ ಹೊಂದಿರುವ ಕಾನೂನುಬದ್ಧ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗಳೇ ಸಾಕಾಗುತ್ತದೆ. ಈ ನಿಟ್ಟಿನಲ್ಲಿ ಹಾಲಿ ಪ್ರಕರಣದಲ್ಲಿ ತಹಶೀಲ್ದಾರ್ ಅವರು; 2026ರ ಜುಲೈ 17ರ ಸುತ್ತೋಲೆಯ ಅನುಸಾರ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ತನ್ನ ಕುಟುಂಬದ 11 ಸದಸ್ಯರನ್ನು ಒಳಗೊಂಡ ವಂಶವೃಕ್ಷ ಪ್ರಮಾಣ ಪತ್ರ ವಿತರಿಸುವಂತೆ ಕೋರಿ ಅರ್ಜಿದಾರರು, ತಾವರೆಕೆರೆಯ ಉಪ ವಲಯದ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕುಟುಂಬದ ಎಲ್ಲ ಸದಸ್ಯರ ವಿಳಾಸದ ದಾಖಲೆ ಮತ್ತು ಮೃತಪಟ್ಟಿರುವ ಸದಸ್ಯರ ಮರಣ ಪ್ರಮಾಣ ಪತ್ರವನ್ನು ಒದಗಿಸಿಲ್ಲ ಎಂಬ ಕಾರಣ ನೀಡಿ ತಹಶೀಲ್ದಾರ್ ಅರ್ಜಿ ತಿರಸ್ಕರಿಸಿದ್ದರು. ಈ ಆದೇಶವನ್ನು ಉಪ ವಿಭಾಗಾಧಿಕಾರಿ ಸಹಾ ಪುರಸ್ಕರಿಸಿದ್ದರು.
“ಕುಟುಂಬದ ಸದಸ್ಯರ ಮರಣದ ನಂತರ, ಕಂದಾಯ ದಾಖಲೆಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರುಗಳ ರೂಪಾಂತರ, ಉದ್ಯೋಗವನ್ನು ಪಡೆಯುವುದು, ಆಸ್ತಿ ವಹಿವಾಟು, ಪಾಲು ದಾವೆ, ಪರಿಹಾರ ಹಕ್ಕುಗಳು ಸೇರಿದಂತೆ ಹಲವಾರು ಆಡಳಿತಾತ್ಮಕ ಉದ್ದೇಶಗಳಿಗಾಗಿ ಬದುಕುಳಿದವರ ಪ್ರಮಾಣಪತ್ರ, ವಂಶಾವಳಿ ಅಥವಾ ವಂಶವೃಕ್ಷವು ಅಗತ್ಯವಾಗಿರುತ್ತದೆ ಎಂಬುದು ಗಮನಾರ್ಹ” ಎಂದು ಪೀಠ ಉಲ್ಲೇಖಿಸಿದೆ.
ವಂಶಾವಳಿಯು ಮೂಲ ಪೂರ್ವಜರಿಂದ ಬಂದಿದೆ ಮತ್ತು ಮರಣದ ಮೊದಲು ಅವರ ಶಾಶ್ವತ ವಾಸಸ್ಥಳವು ನಿರ್ಣಾಯಕ ಅಂಶವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿರುವ ಪೀಠವು ಕಂದಾಯ ಅಧಿಕಾರಿಗಳ ಸ್ಥಳೀಯ ತಪಾಸಣೆ, ವಿಚಾರಣೆಯ ಸಮಯದಲ್ಲಿ ಯಾವುದೇ ಆಕ್ಷೇಪಣೆ ಅಥವಾ ವಿವಾದಗಳು ಕಂಡುಬಂದಿಲ್ಲದೇ ಇದ್ದರೆ, ಅಂತಹ ಪ್ರಮಾಣ ಪತ್ರಗಳನ್ನು ನೀಡಲು ನಿರಾಕರಿಸುವುದು ಸಲ್ಲ ಎಂದು ತಿಳಿಸಿದೆ.
ನಿವಾಸ ಪ್ರಮಾಣ ಪತ್ರ ಕೋರುವ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಗದಿತ ಅವಧಿಯವರೆಗೆ ವಾಸವಾಗಿರುವುದು ಕಡ್ಡಾಯವಾಗಿರಬಹುದು. ಆದರೆ, ವಂಶವೃಕ್ಷದ ಮೂಲ ಪೂರ್ವಜರಿಂದಲೇ ಆರಂಭವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗೆಯೇ, ನಿಧನಕ್ಕೂ ಮುನ್ನ ವ್ಯಕ್ತಿಯೊಬ್ಬರು ಶಾಶ್ವತವಾಗಿ ನೆಲೆಸಿದ್ದ ಸ್ಥಳವೇ ನಿರ್ಣಾಯಕ ಅಂಶವಾಗಿರುತ್ತದೆ. ಹೀಗಾಗಿ, ವಂಶವೃಕ್ಷ ಪ್ರಮಾಣಪತ್ರ ನೀಡುವುದನ್ನು ನಿವಾಸ ಪ್ರಮಾಣ ಪತ್ರ ನೀಡುವುದಕ್ಕೆ ಸಮೀಕರಣ ಮಾಡಲಾಗದು ಎಂದು ಪೀಠ ಹೇಳಿದೆ.