ಆತ್ಮಹತ್ಯೆ ಮಾಡಿಕೊಂಡ ಕೋವಿಡ್ ರೋಗಿಗಳ ಕುಟುಂಬ ಸದಸ್ಯರೂ ಪರಿಹಾರಕ್ಕೆ ಅರ್ಹರು: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ಕೋವಿಡ್‌ಗೆ ಬಲಿಯಾದ ಪ್ರತಿ ವ್ಯಕ್ತಿಯ ಕುಟುಂಬ ಸದಸ್ಯರಿಗೆ ₹ 50,000 ಕೃಪಾನುದಾನ ಪರಿಹಾರಕ್ಕೆ ಶಿಫಾರಸು ಮಾಡುವುದಾಗಿ ಕೇಂದ್ರ ಈ ಹಿಂದೆ ಸುಪ್ರೀಂಕೋರ್ಟ್ಗೆ ತಿಳಿಸಿತ್ತು.
COVID-19
COVID-19

ಕೋವಿಡ್‌ ಸೋಂಕು ಇದೆ ಎಂದು ತಿಳಿದು 30 ದಿನಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರು ಕೂಡ ರಾಜ್ಯ ವಿಪತ್ತು ಪರಿಹಾರ ನಿಧಿಯ ಕೃಪಾನುದಾನ (ಎಕ್ಸ್‌ಗ್ರೇಷಿಯಾ) ಪರಿಹಾರ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

“ಗೌರವಯುತ ನ್ಯಾಯಾಲಯ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ/ಐಎಂಸಿಆರ್‌ ಮಾರ್ಗಸೂಚಿಗಳ ಪ್ರಕಾರ ಕೋವಿಡ್‌ ದೃಢಪಟ್ಟಿದೆ ಎಂದು ತಿಳಿದ 30 ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರು ಕೂಡ ಡಿಎಂಎ ಸೆಕ್ಷನ್ 12 (iii) ಅಡಿಯಲ್ಲಿ ಎನ್‌ಡಿಎಂಎ ಹೊರಡಿಸಿದ 11.09.2021 ರ ಮಾರ್ಗಸೂಚಿಗಳಿಗೆ ಅನುಸಾರವಾಗಿ ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಲಾದ ಹಣಕಾಸಿನ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ" ಎಂದು ಗುರುವಾರ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ ಕೇಂದ್ರ ತಿಳಿಸಿದೆ.

ಕೋವಿಡ್‌ಗೆ ಬಲಿಯಾದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬ ಸದಸ್ಯರಿಗೆ ₹ 50,000 ಪರಿಹಾರವನ್ನು ಶಿಫಾರಸು ಮಾಡಿರುವುದಾಗಿ ಕೇಂದ್ರ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ್ದ ಈ ಹಿಂದಿನ ಅಫಿಡವಿಟ್‌ನಲ್ಲಿ, ರಾಜ್ಯಗಳು ಒದಗಿಸುವ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್) ಪರಿಹಾರ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿತ್ತು.

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರಿಗೆ ಪರಿಹಾರ ಒದಗಿಸುವ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆಯ ಆರಂಭಿಕ ಹಂತದಲ್ಲಿ ಕೇಳಿದ್ದ ಕೆಲ ಪ್ರಶ್ನೆಗಳಿಗೆ ಹೆಚ್ಚುವರಿ ಅಫಿಡವಿಟ್‌
ಉತ್ತರ ನೀಡುವ ಯತ್ನ ಮಾಡಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ಪರಿಹಾರದ ವ್ಯಾಪ್ತಿಯನ್ನು ಹೆಚ್ಚು ವಿಸ್ತೃತಗೊಳಿಸಿ ಮತ್ತು ಹೆಚ್ಚು ಜನರನ್ನು ಒಳಗೊಳ್ಳುವಂತೆ ಮಾಡಲು ಕೋವಿಡ್‌ ದೃಢಪಟ್ಟ 30 ದಿನಗಳಲ್ಲಿ ಸಂಭವಿಸುವ ಸಾವುಗಳನ್ನು ಕೋವಿಡ್‌ ಸಾವುಗಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಸಾವು ಆಸ್ಪತ್ರೆಯಲ್ಲಿ ಅಥವಾ ಒಳರೋಗಿ ಸೌಲಭ್ಯದ ಆಚೆಗೆ ನಡೆದಿದ್ದರೂ ಪರಿಹಾರ ಅನ್ವಯವಾಗುತ್ತದೆ.

  • ಸೆಪ್ಟೆಂಬರ್ 3, 2021 ರ ಮಾರ್ಗಸೂಚಿಗಳು ಜಾರಿಗೆ ಬರುವ ಮೊದಲು ಆಸ್ಪತ್ರೆಗಳು / ಸರ್ಕಾರಿ ಪ್ರಾಧಿಕಾರದಿಂದ ನೀಡಲಾದ ಯಾವುದೇ ಸಾವಿನ ಪ್ರಮಾಣಪತ್ರವನ್ನು ಪರಿಶೀಲಿಸಬಹುದು, ಸರಿಪಡಿಸಬಹುದು ಹಾಗೂ ಹೊಸದಾಗಿ ನೀಡಬಹುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.

  • ಸಂಬಂಧಪಟ್ಟ ಜಿಲ್ಲಾ ಮಟ್ಟದ ಸಮಿತಿಯ ಮುಂದೆ ಅಹವಾಲು ಸಲ್ಲಿಸಲು ಮೃತರ ಸಂಬಂಧಿಕರಿಗೆ ಸ್ವಾತಂತ್ರ್ಯ ನೀಡಲಾಗುವುದು.

  • 30 ದಿನಗಳ ಒಳಗಾಗಿ ರಾಜ್ಯಗಳು ಈ ಸಮಿತಿಗಳನ್ನು ಸ್ಥಾಪಿಸಬೇಕು. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಕ್ತ ಸೂಚನೆಗಳನ್ನು ನೀಡಬಹುದು,

  • ಇದಲ್ಲದೆ, ಸರ್ವೋಚ್ಚ ನ್ಯಾಯಾಲಯ ಎಲ್ಲಾ ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳನ್ನು 30 ದಿನಗಳಲ್ಲಿ ಈ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಬಹುದು.

Related Stories

No stories found.
Kannada Bar & Bench
kannada.barandbench.com