ಕೇಜ್ರಿವಾಲ್ ಬಗ್ಗೆ ತಿರುಚಿದ ವೀಡಿಯೊ ಹಂಚಿಕೊಂಡ ಸಂಬಿತ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ನ್ಯಾಯಾಲಯ ಸೂಚನೆ

ʼತಿರುಚಲಾದ ದೃಶ್ಯʼ ಎಂದು ಗುರುತಿಸಿಕೊಂಡಿದ್ದ ವೀಡಿಯೊವನ್ನು ಸಂಬಿತ್ ಪಾತ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಕೇಜ್ರಿವಾಲ್ ಅವರು ಕೃಷಿ ಕಾನೂನುಗಳ ಪರವಾಗಿ ಮಾತನಾಡುತ್ತಿರುವಂತೆ ವೀಡಿಯೊದಲ್ಲಿ ಬಿಂಬಿಸಲಾಗಿತ್ತು.
ಕೇಜ್ರಿವಾಲ್ ಬಗ್ಗೆ ತಿರುಚಿದ ವೀಡಿಯೊ ಹಂಚಿಕೊಂಡ ಸಂಬಿತ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ನ್ಯಾಯಾಲಯ ಸೂಚನೆ
Sambit Patra

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಗೆಗಿನ ತಿರುಚಲಾದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಮಂಗಳವಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ (ಅತಿಶಿ ಮತ್ತು ಸರ್ಕಾರ ಹಾಗೂ ಇನ್ನಿತರರು).

ರೈತರು ಪ್ರತಿರೋಧ ಒಡ್ಡಿದ್ದ ಮೂರು ಕೃಷಿ ಕಾನೂನುಗಳನ್ನು ದೆಹಲಿ ಮುಖ್ಯಮಂತ್ರಿ ಬೆಂಬಲಿಸುತ್ತಿರುವಂತೆ ವೀಡಿಯೊದಲ್ಲಿ ಬಿಂಬಿಸಲಾಗಿತ್ತು. ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ರೈತರನ್ನು ಪ್ರಚೋದಿಸಲು ಸಂಬಿತ್ ಪಾತ್ರ ಅವರು ಈ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಮರ್ಲೆನಾ ಅವರು ಸಲ್ಲಿಸಿದ ದೂರನ್ನು ಆಧರಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಿಷಬ್ ಕುಮಾರ್ ಅವರು ಆದೇಶ ನೀಡಿದರು.

Also Read
ವಿವಾದಾತ್ಮಕ ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ; ಪ್ರಧಾನಿ ಮೋದಿ ಘೋಷಣೆ

40 ನಿಮಿಷಗಳ ಕಾಲಾವಧಿಯ ವೀಡಿಯೊವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಕೇಜ್ರಿವಾಲ್‌ ಉತ್ತರಿಸಿದ್ದಾರೆ., ಆದರೆ ಪಾತ್ರಾ ಹಂಚಿಕೊಂಡ 18 ಸೆಕೆಂಡುಗಳ ವೀಡಿಯೊದಲ್ಲಿ ಕೇಜ್ರಿವಾಲ್‌ ಅವರೇ ಕೃಷಿ ಕಾಯಿದೆಯನ್ನು ಬೆಂಬಲಿಸುತ್ತಿರುವಂತೆ ತಿರುಚಲಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಸೂಕ್ತ ಸೆಕ್ಷನ್‌ಗಳ ಅಡಿ ಎಫ್‌ಐಆರ್‌ ದಾಖಲಿಸಿಕೊಂಡು ಘಟನೆಯ ಕುರಿತು ತನಿಖೆ ಆರಂಭಿಸಬೇಕು ಎಂದು ಠಾಣಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಫೆಬ್ರವರಿ 3, 2022ರೊಳಗೆ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಸ್ಥಿತಿಗತಿ ವರದಿ ಸಲ್ಲಿಸಬೇಕೆಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com