ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೃಷಿ ಕಾನೂನುಗಳ ರದ್ದತಿ ಕಾಯಿದೆ 2021ಕ್ಕೆ ನವೆಂಬರ್ 30 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಈ ನಿಟ್ಟಿನಲ್ಲಿ ಪ್ರಕಟವಾದ ಗೆಜೆಟ್ ಅಧಿಸೂಚನೆಯಲ್ಲಿ ಕಾನೂನು ರದ್ದತಿ ಕಾಯಿದೆಯ ಉದ್ದೇಶವನ್ನು ವಿವರಿಸಲಾಗಿದೆ. “ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸುಗಮಗೊಳಿಸುವಿಕೆ) ಕಾಯಿದೆ-2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ- 2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ- 2020ನ್ನು ಈ ಕಾಯಿದೆ ಮೂಲಕ ರದ್ದುಗೊಳಿಸಲಾಗಿದೆ” ಎಂದು ಅಧಿಸೂಚನೆ ತಿಳಿಸಿದೆ.
ನವೆಂಬರ್ 29 ರಂದು, ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಮಂಡಿಸಿದ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತ್ತು. ಮಸೂದೆಯನ್ನು ಪರಿಚಯಿಸಿದ ಎಂಟು ನಿಮಿಷಗಳಲ್ಲಿ ಯಾವುದೇ ಚರ್ಚೆ ನಡೆಸದೆ ಧ್ವನಿ ಮತದ ಮೂಲಕ ಸಂಸತ್ತಿನ ಕೆಳಮನೆ ಅಂಗೀಕರಿಸಿತ್ತು. ಅದೇ ದಿನ, ರಾಜ್ಯಸಭೆಯಿಂದ ಕೂಡ ಮಸೂದೆ ಅದೇ ರೀತಿ ಅಂಗೀಕೃತವಾಗಿತ್ತು.
2021ರ ರದ್ದತಿ ಮಸೂದೆಯನ್ನು ಪರಿಚಯಿಸುವ ಮೊದಲು, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ ನಾರಾಯಣ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಲವು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿದ್ದರು. "ಈ ಕಾನೂನುಗಳ ವಿರುದ್ಧ ಆಂದೋಲನದ ಸಂದರ್ಭದಲ್ಲಿ 700ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕಾನೂನನ್ನು ಹಿಂತೆಗೆದುಕೊಂಡಿದೆ" ಎಂದು ಖರ್ಗೆ ಆರೋಪಿಸಿದ್ದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಾವಿನ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರ ಡಿಸೆಂಬರ್ 1 ರಂದು ಸಂಸತ್ತಿಗೆ ತಿಳಿಸಿದೆ.
ಗೆಜೆಟ್ ಅಧಿಸೂಚನೆಯ ಪ್ರತಿ