ದೆಹಲಿಯತ್ತ ಸಾಗುತ್ತಿರುವ ರೈತರ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೇಂದ್ರ ಸರ್ಕಾರ ಮತ್ತು ಹರಿಯಾಣ ಸರ್ಕಾರಗಳು ಮಾಡಿದ್ದ ಮನವಿಯನ್ನು ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿದೆ. (ಉದಯ್ ಪ್ರತಾಪ್ ಸಿಂಗ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ)
ಪ್ರಕರಣವನ್ನು ಫೆಬ್ರವರಿ 29ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ನಿನ್ನೆಯಷ್ಟೇ ಮುಂದೂಡಿತ್ತು. ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ನೀಡುವಂತೆ ಒತ್ತಾಯಿಸಿ ರೈತರು ಇಂದು ದೆಹಲಿ ಚಲೋ ಮೆರವಣಿಗೆಯನ್ನು ಪುನರಾರಂಭಿಸಿದರು. ಹೀಗಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಮತ್ತು ಹರಿಯಾಣ ಅಡ್ವೊಕೇಟ್ ಜನರಲ್ ಬಲದೇವ್ ರಾಜ್ ಮಹಾಜನ್ ಬುಧವಾರ ಬೆಳಿಗ್ಗೆ ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ನ್ಯಾಯಾಲಯವನ್ನು ಕೋರಿದರು.
ಆದರೆ, ರಾಷ್ಟ್ರ ರಾಜಧಾನಿಯತ್ತ ರೈತರ ಮೆರವಣಿಗೆ ತಡೆಯುವುದಕ್ಕಾಗಿ ಯಾವುದೇ ತುರ್ತು ಹಸ್ತಕ್ಷೇಪ ಮಾಡಲು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ನಿರಾಕರಿಸಿತು.
ಪ್ರಕರಣದ ಕುರಿತ ಮೌಖಿಕ ಉಲ್ಲೇಖವನ್ನು ನಿರಾಕರಿಸಲಾಯಿತು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಜೈನ್ ಅವರು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿದರು. ಆದರೆ ಪ್ರಕರಣದ ತುರ್ತು ವಿಚಾರಣೆಗಾಗಿ ಕೇಂದ್ರ ಸರ್ಕಾರ ಯಾವುದೇ ಅರ್ಜಿ ಸಲ್ಲಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ರೈತರ ಪ್ರತಿಭಟನಾ ಮೆರವಣಿಗೆಗೆ ಮುನ್ನ, ಫೆಬ್ರವರಿ 12 ರಂದು ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಲಾಗಿತ್ತು. ಒಂದು ಅರ್ಜಿ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರೆ. ಮತ್ತೊಂದು ಅರ್ಜಿ ಗಡಿ ಬಂದ್, ಅಂತರ್ಜಾಲ ಸ್ಥಗಿತ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿತ್ತು.ಈ ಸಂಬಂಧ ಹೈಕೋರ್ಟ್ ಫೆಬ್ರವರಿ 13 ರಂದು ಕೇಂದ್ರ ಸರ್ಕಾರ ಮತ್ತು ಪಂಜಾಬ್, ಹರಿಯಾಣ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.
ಈ ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಮಾತುಕತೆ ಏರ್ಪಡಿಸುವಂತೆ ಒತ್ತಾಯಿಸಿತ್ತು.
ಮಂಗಳವಾರ ನಡೆದ ವಿಚಾರಣೆಯ ಸಮಯದಲ್ಲಿ, ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವೆ ನಡೆದ ಸಭೆಗಳ ಫಲಿತಾಂಶದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಕೇಂದ್ರವು ಸಮಯ ಕೋರಿತು. ಮಾತುಕತೆಗಳು ಅಪೂರ್ಣವಾಗಿದ್ದರಿಂದ ರೈತರು ದೆಹಲಿಗೆ ಮೆರವಣಿಗೆ ಪುನರಾರಂಭಿಸಿದ್ದಾರೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]