ಕೃಷಿ ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವಾಗ ಧರಣಿ ಮುಂದುವರಿಕೆ ಏಕೆ? ಸುಪ್ರೀಂ ಪ್ರಶ್ನೆ

ನ್ಯಾಯಾಲಯದಲ್ಲಿ ಕೃಷಿ ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿರುವಾಗ ಪ್ರತಿಭಟನೆಯನ್ನು ಮುಂದುವರಿಸುವ ಬದಲು ರೈತರು ವ್ಯವಸ್ಥೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇಡಬೇಕು ಎಂದು ನ್ಯಾ. ಎ ಎಂ ಖಾನ್ವಿಲ್ಕರ್‌ ನೇತೃತ್ವದ ಪೀಠ ಹೇಳಿದೆ.
Farmer protest
Farmer protestIANS

ವಿವಾದಿತ ಮೂರು ಕೃಷಿ ಕಾಯಿದೆಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಶ್ನಿಸಿರುವ ನಡುವೆ ಅವುಗಳ ವಿರುದ್ಧ ಪ್ರತಿಭಟನೆ ಮುಂದುವರಿಸಿರುವ ರೈತರ ನಡೆಗೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದೆ.

ದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿಸುವಂತೆ ಕೋರಿ ಕಿಸಾನ್‌ ಮಹಾಪಂಚಾಯತ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ನೇತೃತ್ವದ ಪೀಠವು ನ್ಯಾಯಾಲಯದಲ್ಲಿ ಕೃಷಿ ಕಾಯಿದೆಗಳ ಸಿಂಧುತ್ವವನ್ನು ಪ್ರಶ್ನಿಸಿರುವಾಗ ಪ್ರತಿಭಟನೆಯನ್ನು ಮುಂದುವರೆಸುವ ಬದಲು ರೈತರು ವ್ಯವಸ್ಥೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇಡಬೇಕು ಎಂದಿದೆ.

“ಕಾನೂನನ್ನು ಪ್ರಶ್ನಿಸಿ ನ್ಯಾಯಾಲಯದ ಮೇಟ್ಟಿಲೇರಿದ ಮೇಲೆ ಪ್ರತಿಭಟನೆ ನಡೆಸುವ ಅಗತ್ಯವೇನಿದೆ. ನ್ಯಾಯಾಲಯಗಳ ಮೇಲೆ ನಿಮಗೆ ನಂಬಿಕೆ ಇದ್ದರೆ ಪ್ರತಿಭಟನೆ ಮಾಡುವ ಬದಲು ತುರ್ತಾಗಿ ಅವುಗಳ ವಿಚಾರಣೆಗೆ ಮುತುವರ್ಜಿ ವಹಿಸಿ” ಎಂದು ಪೀಠ ಹೇಳಿದೆ. ಪ್ರತಿಭಟನೆಯಿಂದ ಸಾಮಾನ್ಯ ಜನರಿಗೆ ಅಡಚಣೆಯಾಗುತ್ತಿರುವುದರ ಬಗ್ಗೆಯೂ ನ್ಯಾಯಾಲಯವು ವಿಚಾರಣೆಯ ವೇಳೆ ಆಕ್ಷೇಪಿಸಿತು.

ನಗರವನ್ನು (ದೆಹಲಿ) ಉಸಿರುಗಟ್ಟಿಸಿದ್ದೀರಿ. ಈಗ ನಗರದ ಒಳಗೆ ಬಂದು ಪ್ರತಿಭಟನೆ ನಡೆಸಲು ಬಯಸಿದ್ದೀರಿ. ಇದು ಇಲ್ಲಿಗೆ ನಿಲ್ಲಬೇಕು. ನೀವು ಹೆದ್ದಾರಿಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದೀರಿ. ಪ್ರತಿಭಟನಾಕಾರರು ಆಸ್ತಿ-ಪಾಸ್ತಿಗಳನ್ನು ನಾಶ ಮಾಡುತ್ತಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಮಾಧ್ಯಮಗಳಲ್ಲಿ ಕಾಣಿಸುತ್ತಿದೆ” ಎಂದು ಪೀಠ ಕಠಿಣವಾಗಿ ಹೇಳಿತು.

Also Read
ಕೃಷಿ ಕಾಯಿದೆ ವಿರುದ್ಧ ಮತ್ತೊಂದು ಧ್ವನಿ: ಸುಪ್ರೀಂಕೋರ್ಟ್ ಮೊರೆ ಹೋದ ಭಾರತೀಯ ಕಿಸಾನ್ ಪಕ್ಷ

ಅರ್ಜಿದಾರರ ಪರ ವಕೀಲ ಅಜಯ್‌ ಚೌಧರಿ ಅವರು “ಹೆದ್ದಾರಿಗಳನ್ನು ನಿರ್ಬಂಧಿಸಿರುವುದು ಪೊಲೀಸ್‌ ಸಿಬ್ಬಂದಿಯೇ ಹೊರತು ರೈತರಲ್ಲ. ಅರ್ಜಿದಾರ ಸಂಸ್ಥೆಯು ಪ್ರತಿಭಟನೆಯ ಭಾಗವಾಗಿಲ್ಲ” ಎಂದರು.

ಇದಕ್ಕೆ ಪೀಠವು ತಾವು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸುವಂತೆ ಆದೇಶ ಮಾಡಿತು. ಅರ್ಜಿಯ ಪ್ರತಿಯನ್ನು ಅಟಾರ್ನಿ ಜನರಲ್‌ ಅವರಿಗೆ ಕಳುಹಿಸಿಕೊಡುವಂತೆ ಅರ್ಜಿದಾರರಿಗೆ ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿತು. ಹಲವು ಸಂಸ್ಥೆಗಳು, ರೈತ ಸಂಘಟನೆಗಳು ಮತ್ತು ವ್ಯಕ್ತಿಗಳಿಂದ ಕೃಷಿ ಕಾಯಿದೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Kannada Bar & Bench
kannada.barandbench.com