ರೈತರ ಪ್ರತಿಭಟನೆ ವೇಳೆ ಯುವ ಕೃಷಿಕನ ಸಾವು: ನ್ಯಾಯಾಂಗ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ

ಕಳೆದ ತಿಂಗಳು ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವೆ ನಡೆದ ಘರ್ಷಣೆ ವೇಳೆ ಪಂಜಾಬ್‌ನ ಬಟಿಂಡಾದ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿದ್ದರು.
ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ
ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ

ಪಂಜಾಬ್-ಹರಿಯಾಣ ಗಡಿಯಲ್ಲಿ ಕಳೆದ ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ 22 ವರ್ಷದ ಯುವ ಕೃಷಿಕ ಸಾವನ್ನಪ್ಪಿದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ಆದೇಶಿಸಿದೆ.

ರೈತನ ಸಾವಿನ ಬಗ್ಗೆ ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಇಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನೊಳಗೊಂಡ (ಎಡಿಜಿಪಿ) ಸಮಿತಿ ರಚಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗುರ್ಮೀತ್ ಸಿಂಗ್ ಸಂಧಾವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.

ಸಮಿತಿಗೆ ಎಡಿಜಿಪಿ ಶ್ರೇಣಿಯ ಅಧಿಕಾರಿಗಳ ಹೆಸರನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಆದೇಶಿಸಲಾಗಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧಾವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧಾವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ

ಒಂದು ತಿಂಗಳೊಳಗೆ ಘಟನೆ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ವರದಿ ಸಲ್ಲಿಸಬೇಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ನಡುವಿನ ಅಧಿಕಾರ ವ್ಯಾಪ್ತಿ, ರೈತನ ಸಾವು ಹಾಗೂ ರೈತರ ಪ್ರತಿಭಟನಾ ಪ್ರದರ್ಶನಕ್ಕೆ ತಕ್ಕಂತೆ ಹರಿಯಾಣ ಪೊಲೀಸರು ಬಳಸಿದ ಬಲಪ್ರಯೋಗ ಇತ್ತೆ ಎಂಬುದನ್ನು ಪರಿಶೀಲಿಸಲು ತ್ರಿಸದಸ್ಯ ಸಮಿತಿಗೆ ಆದೇಶಿಸಲಾಗಿದೆ ಎಂದು ಪ್ರಕರಣದ ವಿಚಾರಣೆ ವೇಳೆ ಹಾಜರಿದ್ದ ಹಿರಿಯ ವಕೀಲ ಎಪಿಎಸ್‌ ದೇವಲ್‌ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಕಳೆದ ತಿಂಗಳು ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವೆ ನಡೆದ ಘರ್ಷಣೆ ವೇಳೆ ಪಂಜಾಬ್‌ನ ಬಟಿಂಡಾದ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿದ್ದರು.

ಘಟನೆಗೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್‌ ದಾಖಲಿಸದ ಪಂಜಾಬ್‌ ಪೊಲೀಸರು, ನಂತರ ಪ್ರಕರಣವನ್ನು ಹರಿಯಾಣ ಪೊಲೀಸರಿಗೆ ವರ್ಗಾಯಿಸಿದ್ದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 13ರಿಂದ ವಿವಿಧ ರೈತ ಸಂಘಗಳು ʼದೆಹಲಿ ಚಲೋ' ಪ್ರತಿಭಟನೆ ಆರಂಭಿಸಿದ್ದವು.

Related Stories

No stories found.
Kannada Bar & Bench
kannada.barandbench.com