ನಾವು ಪ್ರತಿಭಟನೆಯ ವಿರುದ್ಧ ಇಲ್ಲ, ಆದರೆ ರಸ್ತೆ ತಡೆ ಕೂಡದು: ರೈತರ ಪ್ರತಿಭಟನೆ ಕುರಿತು ಸುಪ್ರೀಂಕೋರ್ಟ್‌

ಕೆಲ ವಾರಗಳ ಹಿಂದೆ ಸುಪ್ರೀಂಕೋರ್ಟ್‌ನ ಮತ್ತೊಂದು ಪೀಠ ರೈತರ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕೃಷಿ ಕಾನೂನುಗಳು ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಅದು ತಿಳಿಸಿತ್ತು.
ನಾವು ಪ್ರತಿಭಟನೆಯ ವಿರುದ್ಧ ಇಲ್ಲ, ಆದರೆ ರಸ್ತೆ ತಡೆ ಕೂಡದು: ರೈತರ ಪ್ರತಿಭಟನೆ ಕುರಿತು ಸುಪ್ರೀಂಕೋರ್ಟ್‌

ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದಾಗಲೂ ಅವುಗಳ ಕುರಿತಾದ ಪ್ರತಿಭಟಿಸುವ ಹಕ್ಕಿಗೆ ತಾನು ವಿರುದ್ಧವಾಗಿಲ್ಲ. ಆದರೆ ಇಂತಹ ಪ್ರತಿಭಟನೆಗಳು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸುವುದನ್ನು ಒಳಗೊಂಡಿರಬಾರದು ಎಂದು ಸುಪ್ರೀಂಕೋರ್ಟ್‌ ಗುರುವಾರ ತಿಳಿಸಿದೆ (ಮೋನಿಕಾ ಅಗರ್ವಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾನಿರತ ರೈತರು ನಡೆಸುತ್ತಿರುವ ರಸ್ತೆ ತಡೆಗೆ ಪರಿಹಾರ ಕೋರಿ ಉತ್ತರ ಪ್ರದೇಶದ ನೊಯಿಡಾ ನಿವಾಸಿ ಮೋನಿಕಾ ಅಗರ್ವಾಲ್ ಅವರು ಸಲ್ಲಿಸಿದ್ದ ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕುತೂಹಲಕರ ಸಂಗತಿ ಎಂದರೆ ಕೆಲ ವಾರಗಳ ಹಿಂದೆಯಷ್ಟೇ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಮತ್ತೊಂದು ಪೀಠ ರೈತರ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕೃಷಿ ಕಾನೂನುಗಳು ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಅದು ತಿಳಿಸಿತ್ತು.

ಇಂದು ವಿಚಾರಣೆ ಆರಂಭವಾದಾಗ ಕೆಲ ರೈತ ಸಂಘಗಳನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ದುಷ್ಯಂತ್‌ ದವೆ ಅವರು “ರಸ್ತೆಗಳನ್ನು ಪೊಲೀಸರು ತಡೆಹಿಡಿದಿದ್ದಾರೆಯೇ ವಿನಾ ರೈತರಲ್ಲ" ಎಂದು ಹೇಳಿದರು. "ರಸ್ತೆಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ. ನಮಗೆ ತಡೆಯೊಡ್ಡಿದ ನಂತರ ಬಿಜೆಪಿ ರಾಮಲೀಲಾ ಮೈದಾನದಲ್ಲಿ ಸಮಾವೇಶ ನಡೆಸಿತು. ಪಕ್ಷಪಾತ ಏಕೆ?” ಎಂದು ಪ್ರಶ್ನಿಸಿದರು.

ಆಗ ನ್ಯಾಯಾಲಯ “ನಿಮಗೆ (ರೈತರಿಗೆ) ಯಾವುದೇ ರೀತಿಯಲ್ಲಿ ಚಳವಳಿ ಮಾಡುವ ಹಕ್ಕಿದೆ. ಆದರೆ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ” ಎಂದಿತು.

"ಇಲ್ಲೊಂದು ಒಳ ಉದ್ದೇಶವಿದೆ" ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸರ್ಕಾರದ ಪರ ವಾದ ಮಂಡಿಸಿದರು. ಇದಕ್ಕೆ ಮಾರುತ್ತರ ನೀಡಿದ ದವೆ ಅವರು “ಹೌದು ಕಾನೂನುಗಳನ್ನು ಅಂಗೀಕರಿಸುವಾಗ ಇದ್ದಂತೆಯೇ…” ಎಂದರು. ರಸ್ತೆಗಳನ್ನು ಯಾರ ತಡೆದಿದ್ದಾರೆ ಎಂಬ ನಿಟ್ಟಿನಲ್ಲಿ ಪೀಠದ ವಿಚಾರಣೆ ಸಾಗಿತು.

"ರಸ್ತೆಗಳನ್ನು ವಶಪಡಿಸಿಕೊಳ್ಳಬಹುದು ಎಂಬುದು ನಿಮ್ಮ ವಾದವೇ ಅಥವಾ ಅವುಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ ಎಂಬುದು ನಿಮ್ಮ ವಾದವೇ" ಎಂದು ಅದು ಕೇಳಿತು.

ದೆಹಲಿ ಪೊಲೀಸರು ವ್ಯವಸ್ಥೆ ಮಾಡಿರುವ ರೀತಿಯಿಂದಾಗಿ ರಸ್ತೆಗಳಿಗೆ ತಡೆ ಒಡ್ಡಿದಂತಾಗಿದೆ. ರೈತರೇ ರಸ್ತೆಗಳಿಗೆ ತಡೆ ಒಡ್ಡಿದ್ದಾರೆ ಎಂಬ ಭಾವನೆ ಬರುವಂತೆ ಇದು ಇದೆ. ರಾಮಲೀಲಾ ಮೈದಾನದ ವಿಚಾರಕ್ಕೆ ನಾವು ಬರೋಣ” ಎಂದರು. ಇದೇ ವೇಳೆ ಅವರು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದರು. ಅಂತಿಮವಾಗಿ ನ್ಯಾಯಾಲಯ ರೈತ ಸಂಘಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 7ಕ್ಕೆ ನಿಗದಿಯಾಗಿದೆ.

“ನಮ್ಮ ಮುಂದೆ ವಿಚಾರಣೆಗೆ ಬಂದಿರುವ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಲಾಗಿದೆ. ಮೊದಲು ನಾವು ಪ್ರಕರಣದ ಎಲ್ಲೆಗಳನ್ನು ನಿರ್ಧರಿಸುತ್ತೇವೆ. ಅಗತ್ಯ ಬಿದ್ದರೆ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲು ನಿರ್ಧಾರ ಕೈಗೊಳ್ಳಲಾಗುವುದು. 3 ವಾರಗಳಲ್ಲಿ ಪ್ರತಿಕ್ರಿಯೆಗಳನ್ನು ಆ ಬಳಿಕ ಪ್ರತ್ಯುತ್ತರಗಳನ್ನು ಸಲ್ಲಿಸಬೇಕು. ಆರು ವಾರಗಳ ನಂತರ ಪ್ರಕರಣವನ್ನು ಪಟ್ಟಿ ಮಾಡಿ” ಎಂದು ನ್ಯಾಯಾಲಯ ಸಂಬಂಧಪಟ್ಟವರಿಗೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com