ಜಾರಕಿಹೊಳಿ ಸಿಡಿ ಹಗರಣ: ಮಗಳ ಹೇಳಿಕೆ ರದ್ದುಗೊಳಿಸಲು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಪೋಷಕರು

ಒತ್ತಡದಲ್ಲಿ ತನ್ನ ಮಗಳು ಹೇಳಿಕೆ ನೀಡಿದ್ದು ಅದನ್ನು ಪರಿಗಣಿಸಬಾರದು ಎಂದು ಯುವತಿಯ ತಂದೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಜಾರಕಿಹೊಳಿ ಸಿಡಿ ಹಗರಣ: ಮಗಳ ಹೇಳಿಕೆ ರದ್ದುಗೊಳಿಸಲು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಪೋಷಕರು

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ನ್ಯಾಯಾಧೀಶರ ಮುಂದೆ ದಾಖಲಿಸಿಕೊಳ್ಳಲಾದ ಪ್ರಮಾಣೀಕೃತ ಹೇಳಿಕೆಯನ್ನು ರದ್ದುಗೊಳಿಸಬೇಕೆಂದು ಕೋರಿ ಯುವತಿಯ ತಂದೆ ಬುಧವಾರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ.

ಒತ್ತಡದಲ್ಲಿ ತನ್ನ ಮಗಳು ಹೇಳಿಕೆ ನೀಡಿದ್ದು ಅದನ್ನು ಪರಿಗಣಿಸಬಾರದು ಎಂದು ಯುವತಿಯ ತಂದೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಸಿಡಿ ಪ್ರಕರಣದ ಸಂಬಂಧ ಮಾರ್ಚ್‌ 30ರಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ಸಂತ್ರಸ್ತೆಯಾಗಿರುವ ನನ್ನ ಮಗಳು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲಿಸಿದ್ದಾಳೆ. ಆದರೆ ಯಾವುದೋ ಒತ್ತಡ ಮತ್ತು ಪ್ರಭಾವದ ಕಾರಣಕ್ಕೆ ಮಗಳು ಈ ರೀತಿ ಹೇಳಿಕೆ ನೀಡಿದ್ದಾಳೆ. ಆಕೆ ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಕೆಯ ಹೇಳಿಕೆ ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಅವರ ಉಪಸ್ಥಿತಿಯಲ್ಲಿ ಮಗಳ ಹೇಳಿಕೆ ದಾಖಲಾಗಿದೆ. ಕಾನೂನು ಪ್ರಕಾರ ಇದೊಂದು ಲೋಪ ಎಂದು ಕೂಡ ಮನವಿಯಲ್ಲಿ ತಿಳಿಸಲಾಗಿದೆ. ಮಗಳ ಗೌರವ ಘನತೆ ಹಾಗೂ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವ ಯತ್ನ ನಡೆದಿದೆ. ರಾಜಕೀಯ ಮೇಲಾಟಕ್ಕೆ ನಾನು ನನ್ನ ಮಗಳು ಹಾಗೂ ಕುಟುಂಬ ಬಲಿಪಶುವಾಗಿದ್ದೇವೆ. ಗೃಹ ಇಲಾಖೆ, ಎಸ್‌ಐಟಿ ಹಾಗೂ ಕಬ್ಬನ್‌ಪಾರ್ಕ್‌ ಪೊಲೀಸರು ಇದರ ಹೊಣೆ ಹೊರಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ ಎನ್ನಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಪ್ರಮುಖವಾಗಿದ್ದು ಮಗಳ ಹೇಳಿಕೆ ಪಡೆಯುವಾಗ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಹಾಗಾಗಿ ಅರ್ಜಿ ಇತ್ಯರ್ಥವಾಗುವವರೆಗೂ ಮಗಳ ಹೇಳಿಕೆಯನ್ನು ಪರಿಗಣಿಸಿ ಯಾವುದೇ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ವಿನಂತಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com