ತಾಯಿಯ ವಶದಲ್ಲಿದ್ದ ಮಗುವನ್ನು ತಂದೆ ಕರೆದೊಯ್ದರೆ ಅವರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗದು: ಬಾಂಬೆ ಹೈಕೋರ್ಟ್‌

ಸಕ್ಷಮ ನ್ಯಾಯಾಲಯದಿಂದ ಯಾವುದೇ ನಿರ್ಬಂಧ ಆಗಿಲ್ಲದಿರುವುದರಿಂದ ತನ್ನ ಅಪ್ರಾಪ್ತ ಮಗುವನ್ನು ತಂದೆಯು ತಾಯಿಯ ವಶದಿಂದ ಕರೆದೊಯ್ಯುವುದು ಅಪರಾಧವಾಗದು ಎಂದು ನ್ಯಾಯಾಲಯ ಹೇಳಿದೆ.
Nagpur Bench of Bombay High Court
Nagpur Bench of Bombay High Court

ತಾಯಿಯ ವಶದಲ್ಲಿದ್ದ ಮಗುವನ್ನು ತಂದೆಯು ಕರೆದೊಯ್ದರೆ ಐಪಿಸಿಯ ಅಡಿ ತಂದೆಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಈಚೆಗೆ ಹೇಳಿದೆ [ಆಶೀಶ್‌ ಅನಿಲ್‌ಕುಮಾರ್‌ ಮುಳೆ ವರ್ಸಸ್‌ ಮಹಾರಾಷ್ಟ್ರ ಸರ್ಕಾರ].

ಸಕ್ಷಮ ನ್ಯಾಯಾಲಯದಿಂದ ಯಾವುದೇ ನಿರ್ಬಂಧ ಆಗಿಲ್ಲದಿರುವುದರಿಂದ ತನ್ನ ಅಪ್ರಾಪ್ತ ಮಗುವನ್ನು ತಂದೆಯು ತಾಯಿಯ ವಶದಿಂದ ಕೊಂಡೊಯ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಪರಿತ್ಯಕ್ತ ಪತ್ನಿಯ ಬಳಿ ಇದ್ದ ಮೂರು ವರ್ಷದ ಪುತ್ರನನ್ನು ಕರೆದೊಯ್ದ ಆರೋಪದ ಮೇಲೆ ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ 363 (ಅಪಹರಣ) ರ ಅಡಿ ದಾಖಲಿಸಿದ್ದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿನಯ್‌ ಜೋಶಿ ಮತ್ತು ವಾಲ್ಮಿಕಿ ಎಸ್‌ ಎ ಮೆನೆಜೆಸ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ನ್ಯಾಯಾಲಯವು ಆಕ್ಟೋಬರ್ 6ರಂದು ನೀಡಿರುವ ತೀರ್ಪಿನಲ್ಲಿ ಯಾವುದೇ ಜೈವಿಕ ತಂದೆಯ ವಿರುದ್ಧ ತನ್ನದೇ ಮಗುವನ್ನು ಅಪಹರಿಸಿದ ಆರೋಪದಡಿ ಪ್ರಕಣ ದಾಖಲಿಸಲಾಗದು ಎಂದು ಸ್ಪಷ್ಟಪಡಿಸಿತು.

“ಪತ್ನಿಯ ವಶದಲ್ಲಿದ್ದ ಮಗುವನ್ನು ತಂದೆ ಕೊಂಡೊಯ್ಯುವುದು ಕಾನೂನಾತ್ಮಕವಾಗಿ ಪೋಷಣೆ ಮಾಡುತ್ತಿರುವ ತಾಯಿಯಿಂದ ಮತ್ತೊಬ್ಬ ಕಾನೂನಾತ್ಮಕ ಪೋಷಣೆ ಹೊಣೆಗಾರಿಕೆ ಹೊಂದಿರುವ ತಂದೆ ಕೊಂಡೊಯ್ಯುವುದಾಗಿದೆ. ತಂದೆಯೂ ಮಗುವಿನ ಪೋಷಕರಾಗಿದ್ದಾರೆ. ಹೀಗಾಗಿ, ತಂದೆಯು ಮಗುವನ್ನು ಅಪಹರಿಸಿದ್ದಾರೆ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಕಾನೂನಾತ್ಮಕವಾಗಿ ಪೋಷಕರಾಗಿರುವವರ ವಶದಿಂದ ಅಪ್ರಾಪ್ತ ವಯಸ್ಸಿನ ಮಗುವನ್ನು ಕೊಂಡೊಯ್ಯುವುದು ಅಪರಾಧವಾಗುತ್ತದೆ. ಇದು ಅಪ್ರಾಪ್ತ ಮಗುವನ್ನು ಕಾನೂನುಬದ್ಧವಾಗಿ ತಾಯಿಯ ಕಸ್ಟಡಿಗೆ ಸಕ್ಷಮ ನ್ಯಾಯಾಲಯ ನೀಡಿರುವ ಪ್ರಕರಣವಲ್ಲ” ಎಂದು ನ್ಯಾಯಾಲಯ ಹೇಳಿದೆ. ಹಾಲಿ ಪ್ರಕರಣದಲ್ಲಿ ತಾಯಿಯಂತೆ ತಂದೆಯೂ ಕಾನೂನಾತ್ಮಕವಾಗಿ ಮಗುವಿನ ಪೋಷಕರಾಗಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. 

Kannada Bar & Bench
kannada.barandbench.com