

ಮಾರಿಷಸ್ ದೇಶದ ವಿವಿಧ ಕಂಪೆನಿಗಳಿಂದ ಪಡೆದಿರುವ ₹960 ಕೋಟಿ ಹೂಡಿಕೆ ಹಣವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪುತ್ರಿ, ದಿವಂಗತ ವಿ ಜಿ ಸಿದ್ಧಾರ್ಥ ಅವರ ಪತ್ನಿ ಹಾಗೂ ಕೆಫೆ ಕಾಫಿ ಡೇ (ಸಿಸಿಡಿ) ಎಂದೇ ಜನಪ್ರಿಯವಾಗಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ನ (ಸಿಡಿಇಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಳವಿಕಾ ಹೆಗ್ಡೆ ಅವರಿಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಷೋಕಾಸ್ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿ 2022ರ ನವೆಂಬರ್ 3ರ ದೂರು ಮತ್ತು ನವೆಂಬರ್ 23ರಂದು ಜಾರಿ ಮಾಡಿರುವ ಶೋಕಾಸ್ ನೋಟಿಸ್ ರದ್ದತಿ ಕೋರಿ ಮಾಳವಿಕಾ ಹೆಗ್ಡೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.
“ಮಾಳವಿಕಾ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು ಮಾಳವಿಕಾ ಪತಿ ಸಿದ್ಧಾರ್ಥ ಅವರು 2019ರಲ್ಲಿ ನಿಧನರಾಗಿದ್ದು, ಅವರ ವಾರಸುದಾರರು ಎಂದು ಮಾಳವಿಕಾಗೆ ಫೆಮಾ ಕಾಯಿದೆ ಸೆಕ್ಷನ್ 16ರ ಅಡಿ 3-11-2022ರಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಸಾವನ್ನಪ್ಪಿರುವವರ ವಿರುದ್ಧದ ಪ್ರಕರಣವನ್ನು ಅವರ ವಾರಸುದಾರರ ವಿರುದ್ಧ ಮುಂದುವರಿಸಲು ಕಾನೂನಿನ ಅಡಿ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಈ ವಾದವನ್ನು ಆಲಿಸಿ ಅರ್ಜಿದಾರರಿಗೆ ಸೀಮಿತವಾಗಿ 23-11-2022ರ ಶೋಕಾಸ್ ನೋಟಿಸ್ ಮತ್ತು ಅದರಡಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಹಿರಿಯ ವಕೀಲ ಸಜನ್ ಪೂವಯ್ಯ ಅವರು “ಕೆಫೆ ಕಾಫಿ ಡೇಯನ್ನು ವಿ ಜಿ ಸಿದ್ಧಾರ್ಥ ಅವರು ಆರಂಭಿಸಿ, ಮುನ್ನಡೆಸುತ್ತಿದ್ದರು. 2010ರಲ್ಲಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ನಡೆದಿತ್ತು. ಈ ಸಂಬಂಧ 2022ರ ನವೆಂಬರ್ 3ರಂದು ಜಾರಿ ನಿರ್ದೇಶನಾಲಯ ದೂರು ದಾಖಲಿಸುವ ವೇಳೆಗೆ ಸಿದ್ಧಾರ್ಥ ನಿಧನರಾಗಿದ್ದರು. ಹೀಗಾಗಿ, ವಾರಸುದಾರರು ಎಂದು ಮಾಳವಿಕಾ ವಿರುದ್ಧ ದೂರು ದಾಖಲಿಸಲಾಗದು” ಎಂದರು.
“ಸಿಸಿಡಿಯ ವಿರುದ್ಧ ದೂರು ಇದ್ದು, ಸಿದ್ಧಾರ್ಥ ಅವರ ಪತ್ನಿ ಹಾಗೂ ವಾರಸುದಾರೆ ಎಂದು ಅವರನ್ನೂ ಎಳೆದು ತರಲಾಗಿದೆ. ಆರೋಪಿತ ಅಕ್ರಮ ನಡೆದ ಸಂದರ್ಭದಲ್ಲಿ ಸಿದ್ಧಾರ್ಥ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಫೆಮಾ ಕಾಯಿದೆ ಸೆಕ್ಷನ್ 43ರ ಅಡಿ ಸಿದ್ಧಾರ್ಥ ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು. ಸಿದ್ಧಾರ್ಥ ಸಾವನ್ನಪ್ಪಿರುವುದರಿಂದ ಅವರ ವಿರುದ್ಧವೂ ಪ್ರಕ್ರಿಯೆ ನಡೆಸಲಾಗದು” ಎಂದರು.
“ಮಾಳವಿಕಾ ಸಿದ್ಧಾರ್ಥ್ ಅವರ ಪತ್ನಿಯಾಗಿದ್ದು, ಸಿದ್ಧಾರ್ಥ ಅವರ ವಾರಸುದಾರರಾಗಿ ಬಂದು ಪ್ರತಿಕ್ರಿಯಿಸಬೇಕು ಎಂದು 2010ರಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಮಾಳವಿಕಾಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬಗ್ಗೆ ಮಾಳವಿಕಾಗೆ ಏನು ಗೊತ್ತಿದೆ? ಈ ಪ್ರಕ್ರಿಯೆಯನ್ನು ಮಾಳವಿಕಾ ಎದುರಿಸಬೇಕು ಎನ್ನಲಾಗದು. ಹೀಗಾಗಿ, ಶೋಕಾಸ್ ನೋಟಿಸ್‌ಗೆ ತಡೆ ನೀಡಬೇಕು” ಎಂದು ಕೋರಿದರು.
2010ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಾರಿಷಸ್‌ನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಪ್ರೈವೇಟ್ ಈಕ್ವಿಟಿ, ಕೆಕೆಆರ್ ಮಾರಿಷಸ್ ಪಿಇ ಇನ್‌ವೆಸ್ಟ್‌ಮೆಂಟ್, ಅರ್ಡ್ಯೋನೊ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಎನ್‌ಎಸ್‌ಆರ್ ಪಿಇ ಮಾರಿಷಸ್ ಎಲ್‌ಎಲ್‌ಸಿಯಿಂದ ಒಟ್ಟಾರೆ ₹960 ಕೋಟಿ ವಿದೇಶಿ ನೇರ ಹೂಡಿಕೆಯ ಹಣವನ್ನು ಸಿಡಿಇಎಲ್ ಪಡೆದಿತ್ತು. ಇದನ್ನು ಭಾರತದ ಬೇರೆ ಕಂಪನಿಗಳಲ್ಲಿ ಷೇರು ಖರೀದಿಸಲು ಬಳಕೆ ಮಾಡಿದೆ ಎಂದು ಜಾರಿ ನಿರ್ದೇನಾಲಯ ದೂರಿದೆ. ಈ ಹಣ ವರ್ಗಾವಣೆ ನಡೆದು 12 ವರ್ಷಗಳ ಬಳಿಕ ಜಾರಿ ನಿರ್ದೇಶನಾಲಯ ದೂರು ದಾಖಲಿಸಿದ್ದು, ಶೋಕಾಸ್ ನೋಟಿಸ್ ಮತ್ತು ನೋಟಿಸ್‌ಗಳನ್ನು ಇ ಡಿ ಮಾಳವಿಕಾಗೆ ಜಾರಿ ಮಾಡಿದೆ. ಇದನ್ನು ಅವರು ಪ್ರಶ್ನಿಸಿದ್ದಾರೆ.