ಕಾನೂನು ಜಾರಿ ಸಂಸ್ಥೆಗಳ ಭೀತಿಯಿಂದ ಸಂತ್ರಸ್ತರು ಡಿಜಿಟಲ್ ಅಪರಾಧಗಳ ಕುರಿತು ಹೇಳಿಕೊಳ್ಳುತ್ತಿಲ್ಲ: ನ್ಯಾ. ಖನ್ನಾ

ಕಾನೂನು ಜಾರಿ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅಪನಂಬಿಕೆಯಿಂದಾಗಿ ಸೈಬರ್ ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.
Justice Sanjiv Khanna
Justice Sanjiv Khanna
Published on

ಕಾನೂನು ಜಾರಿ ಸಂಸ್ಥೆಗಳ ಬಗೆಗಿನ ಭೀತಿಯಿಂದಾಗಿ ಸಂತ್ರಸ್ತರು ಡಿಜಿಟಲ್ ಅಪರಾಧಗಳ ಕುರಿತು ಹೇಳಿಕೊಳ್ಳುತ್ತಿಲ್ಲ: ನಿವೃತ್ತ ಸಿಜೆಐ ಖನ್ನಾ

ವೈಟ್-ಕಾಲರ್ ಅಪರಾಧಗಳನ್ನು ಎದುರಿಸುವ ಕುರಿತಾದ ಸಮ್ಮೇಳನದಲ್ಲಿ ಮಾತನಾಡಿದ ನ್ಯಾ. ಖನ್ನಾ, ಕಾನೂನು ಜಾರಿ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅಪನಂಬಿಕೆಯಿಂದಾಗಿ ಸೈಬರ್ ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.

-

ಕಾನೂನು ಜಾರಿ ಸಂಸ್ಥೆಗಳನ್ನು ನಂಬುವ ಬದಲು ಭಯಪಡಬೇಕಾದಂತಹ ಸ್ಥಿತಿ ಇದೆ ಎಂಬ ಗ್ರಹಿಕೆ ಹೆಚ್ಚುತ್ತಿದೆ. ಇದರಿಂದಾಗಿ ಡಿಜಿಟಲ್ ಅಪರಾಧಗಳ ಸಂತ್ರಸ್ತರು ದೂರು ನೀಡುವಾಗ ಕಾನೂನು ಜಾರಿ ಸಂಸ್ಥೆಗಳ ನೆರವು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಕಳವಳ ವ್ಯಕ್ತಪಡಿಸಿದ್ದಾರೆ.

ವೈಟ್-ಕಾಲರ್ ಅಪರಾಧಗಳನ್ನು (ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ನಡೆಸುವ ಹಣಕಾಸು ವಂಚನೆ ಮತ್ತಿತರ ಕೃತ್ಯಗಳು) ಎದುರಿಸುವ ಕುರಿತಂತೆ ತೇರಾಪಂತ್ ಪ್ರೊಫೆಷನಲ್ ಫೋರಮ್ (ಟಿಪಿಎಫ್) ಅಕ್ಟೋಬರ್ 11ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾನೂನು ಜಾರಿ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಇಂತಹ ಅಪನಂಬಿಕೆ ಸೈಬರ್ ಅಪರಾಧಿಗಳ ಸಂಖ್ಯೆ ಬೆಳೆಯಲು ಅವಕಾಶ ನೀಡುತ್ತಿದೆ ಎಂದು ಎಚ್ಚರಿಸಿದ ಅವರು, ಕಾನೂನು ಜಾರಿ ಸಂಸ್ಥೆಗಳು ಸಹಾಯ ಮಾಡುವ ಬದಲು ಕಿರುಕುಳ ನೀಡಲು ಅಸ್ತಿತ್ವದಲ್ಲಿವೆ ಎಂಬ ಗ್ರಹಿಕೆ ಚಾಲ್ತಿಯಲ್ಲಿದೆ. ಆಳವಾಗಿ ಬೇರೂರಿರುವ ಇಂತಹ ಭಯದಿಂದಾಗಿ ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳಲ್ಲಿ ಅಪರಾಧಿಗಳು ಜನರನ್ನು ಶೋಷಿಸಲು ಅವಕಾಶ ಮಾಡಿಕೊಟ್ಟಿದೆ. ನ್ಯಾಯಪಡೆಯುವ ಬದಲು ಅನೇಕರು ಭಯದಿಂದಾಗಿ ಕಿರುಕುಳ ನೀಡುವವರಿಗೆ ಹಣ ನೀಡುವಂತಾಗಿದೆ. ಇದನ್ನು ತಪ್ಪಿಸಲು ಕಾನೂನು ಜಾರಿ ಸಂಸ್ಥೆಗಳು ಹೆಚ್ಚು ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಎಂದರು.

ವೈಟ್ ಕಾಲರ್ ಅಪರಾಧ ಕಾನೂನು ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ ಆಡಳಿತದ ಆತ್ಮಸಾಕ್ಷಿಯನ್ನೇ ಅಲುಗಾಡಿಸುತ್ತಿದೆ. ಹಣಕಾಸು ಲೋಪಗಳ ವಿರುದ್ಧ ಕಾನೂನುಗಳನ್ನು ಹೆಚ್ಚು ಸೂಕ್ಷ್ಮತೆಯಿಂದ ಜಾರಿಗೆ ತರಬೇಕೆಂದು ಅವರು ಕರೆ ನೀಡಿದರು. ಶಾಸನ ರೂಪಿಸುವವರು ಉದ್ದೇಶಪೂರ್ವಕ ವಂಚನೆ, ಉದ್ದೇಶಪೂರ್ವಕವಲ್ಲದ ದೋಷ ಮತ್ತು ಕಾರ್ಯವಿಧಾನದ ಲೋಪಗಳ ನಡುವೆ ವ್ಯತ್ಯಾಸಗುರುತಿಸಬೇಕೆಂದು ಅವರು ಒತ್ತಾಯಿಸಿದರು.

ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಜಾರಿ ನಿರ್ದೇಶನಾಲಯ (ಇ ಡಿ) ನಿರ್ದೇಶಕ ಕರ್ನಲ್ ಸಿಂಗ್, ಆರ್ಥಿಕ ವಂಚನೆಯ ತನಿಖೆ ಸುಗಮಗೊಳಿಸಲು ಮತ್ತು ಬಹು ತನಿಖಾ ಸಂಸ್ಥೆಗಳು ಒಂದೇ ರೀತಿಯಲ್ಲಿ ನಡೆಸುವ ಯತ್ನಗಳನ್ನು ತಡೆಯಲು ದೇಶದಲ್ಲಿ ಸಮಗ್ರ ತನಿಖಾ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕಿದೆ ಎಂದರು.

ಆಗಸ್ಟಾವೆಸ್ಟ್ ಲ್ಯಾಂಡ್ ಲಂಚ ಪ್ರಕರಣವನ್ನು ಉಲ್ಲೇಖಿಸಿದ ಸಿಂಗ್ ಅವರು ಲಂಚದ ಬೇರುಗಳು ಹಲವು ದೇಶಗಳಲ್ಲಿ ಚಾಚಿಕೊಂಡಿದ್ದರೂ ಭಾರತಕ್ಕೆ ಸಂಬಂಧಿಸಿದ ಒಂದು ಸಣ್ಣ ಭಾಗ ಮಾತ್ರ ಪ್ರಸ್ತಾಪಿತವಾಗಿದೆ. ಉಳಿದುದ್ದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಂತಹ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲು ತನಿಖಾ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರ ನಡುವೆ ಸರಿಯಾದ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶಿಶ್ ಕುಮಾರ್ ಚೌಹಾಣ್, ಟಿಪಿಎಫ್ ರಾಷ್ಟ್ರೀಯ ಸಂಚಾಲಕ ರಾಜ್ ಕುಮಾರ್ ನಹಾತಾ ಮಾತನಾಡಿದರು.

Kannada Bar & Bench
kannada.barandbench.com