ಸಿದ್ದಿಕಿ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ: ಸಮರ್ಥ ಪ್ರಜಾಪ್ರಭುತ್ವಕ್ಕೆ ನಿರ್ಭೀತ ಮಾಧ್ಯಮ ಅತ್ಯಗತ್ಯ ಎಂದ ಸಿಜೆಐ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಮೃತಪಟ್ಟ ಭಾರತೀಯ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಅವರಿಗೆ ಮರಣೋತ್ತರವಾಗಿ ರೆಡ್ಇಂಕ್ ಪ್ರಶಸ್ತಿ ಪ್ರದಾನ ಮಾಡಿ ಸಿಜೆಐ ಅವರು ಮಾತನಾಡಿದರು.
CJI N V Ramana

CJI N V Ramana

Published on

ಸಮರ್ಥ ಪ್ರಜಾಪ್ರಭುತ್ವಕ್ಕೆ ಮುಕ್ತ ಮತ್ತು ನಿರ್ಭೀತ ಪತ್ರಿಕಾ ಮಾಧ್ಯಮ ಅತ್ಯಗತ್ಯ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಹೇಳಿದ್ದಾರೆ.

ಮುಂಬೈ ಪ್ರೆಸ್‌ ಕ್ಲಬ್‌ ವತಿಯಿಂದ ನೀಡಲಾಗುವ ʼರೆಡ್‌ ಇಂಕ್‌ ವರ್ಷದ ಪತ್ರಕರ್ತʼ ಪ್ರಶಸ್ತಿಯನ್ನು ಆಫ್ಘಾನಿಸ್ತಾನದಲ್ಲಿ ಈ ವರ್ಷ ತಾಲಿಬಾನ್‌ ದಾಳಿ ವೇಳೆ ಮೃತಪಟ್ಟ ಭಾರತೀಯ ಫೋಟೊ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ದಿಕಿ ಅವರಿಗೆ ಬುಧವಾರ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಿದ್ದಿಕಿ ಅವರು ಖ್ಯಾತ ಸುದ್ದಿಸಂಸ್ಥೆ ʼರಾಯಿಟರ್ಸ್‌ʼಗೆ ಸೇವೆ ಸಲ್ಲಿಸುತ್ತಿದ್ದರು. ವರ್ಚುವಲ್‌ ವಿಧಾನದಲ್ಲಿ ಪ್ರದಾನ ಮಾಡಲಾದ ಪ್ರಶಸ್ತಿಯನ್ನು ಸಿದ್ದಿಕಿ ಅವರ ಪತ್ನಿ ಫ್ರೆಡರಿಕ್‌ ಸಿದ್ದಿಕಿ ಸ್ವೀಕರಿಸಿದರು.

ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವ ಪತ್ರಕರ್ತರ ಪಾತ್ರ ಉದಾತ್ತವಾದುದು. ಪತ್ರಕರ್ತರ ವೃತ್ತಿಯೂ ವಕೀಲರಷ್ಟೇ ಶ್ರೇಷ್ಠವಾದುದು ಎಂದು ಸಿಜೆಐ ಈ ಸಂದರ್ಭದಲ್ಲಿ ತಿಳಿಸಿದರು.

"ಸಮರ್ಥ ಪ್ರಜಾಪ್ರಭುತ್ವಕ್ಕಾಗಿ ನಿರ್ಭೀತ ಮಾಧ್ಯಮ ಅಗತ್ಯವಿದೆ. ವಕೀಲ ವೃತ್ತಿ ಉದಾತ್ತ ವೃತ್ತಿ ಎಂದು ಹೇಳಲಾಗುತ್ತದೆ. ಆದರೆ ಪತ್ರಕರ್ತ ವೃತ್ತಿಯೂ ಉದಾತ್ತವಾದುದು ಎಂದು ನಾನು ಹೇಳಬಲ್ಲೆ. ಪತ್ರಕರ್ತನಾಗಿ ವೃತ್ತಿಜೀವನ ಪ್ರಾರಂಭಿಸಿದ ಒಬ್ಬ ವ್ಯಕ್ತಿಯಾಗಿ ನಾನು ನಿಮ್ಮ (ಪತ್ರಕರ್ತರ) ಕಷ್ಟ ಮತ್ತು ಹೋರಾಟಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವುದು ಮತ್ತು ಸಮಾಜಕ್ಕೆ ಕನ್ನಡಿ ಹಿಡಿಯುವುದು ಒಂದು ದೊಡ್ಡ ಜವಾಬ್ದಾರಿಯಾಗಿದ್ದು ಅದನ್ನು ನಿಭಾಯಿಸುವುದು ಅತ್ಯಂತ ಕಷ್ಟಕರವಾದುದು, ”ಎಂದು ಅವರು ಹೇಳಿದರು.

ಆದರೆ ಪತ್ರಕರ್ತರು ಕಠಿಣ ಜೀವನ ನಡೆಸುತ್ತಿದ್ದರೂ ಅವರಿಗೆ ದೊರೆಯುತ್ತಿರುವ ವೇತನ ಕಡಿಮೆಯಾಗಿದ್ದು. ಸಂಬಳ ಪ್ರೋತ್ಸಾಹಕರವಾಗಿಲ್ಲ ಎಂದರು. ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಆಗಮನದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ಅವರು ಮಾತನಾಡಿದರು.

Also Read
ಕಣ್ಮರೆಯಾಗುತ್ತಿರುವ ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಕರೆ ನೀಡಿದ ಸಿಜೆಐ ಎನ್ ವಿ ರಮಣ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಂತಲ್ಲದೆ, ದುರದೃಷ್ಟವಶಾತ್ ಯೂಟ್ಯೂಬ್ ರೀತಿಯ ಸಾಮಾಜಿಕ ವೇದಿಕೆಗಳು ವೃತ್ತಿ ಹಾಗೂ ಜೀವನವನ್ನೇ ಹಾಳು ಮಾಡುವಂತಹ ಅತ್ಯಂತ ಅವಹೇಳನಕಾರಿ ಮತ್ತು ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡಿದ ನಂತರವೂ ಅವುಗಳನ್ನು ಹೊಣೆಗಾರನಾಗಿ ಮಾಡುವುದು ಬಹುತೇಕ ದುಸ್ಸಾಧ್ಯವಾಗಿದೆ ಎಂದು ಅವರು ಹೇಳಿದರು.

"ಕಾನೂನು ವರದಿಗಾರಿಕೆ ವೃತ್ತಿಪರರನ್ನು ಹೊಂದಿರಬೇಕು. ಮಾಧ್ಯಮ ಸಂಸ್ಥೆಗಳು ವೃತ್ತಿಪರರನ್ನು ನೇಮಿಸಿಕೊಳ್ಳುವ ಬಗ್ಗೆ ಯೋಚಿಸಬೇಕು... ಇತರ ಭಾರತೀಯ ಭಾಷಾ ಮಾಧ್ಯಮಗಳು ಮತ್ತು ಸಣ್ಣ ಮಾಧ್ಯಮ ಸಂಸ್ಥೆಗಳ ವಿಷಯಕ್ಕೆ ಬಂದಾಗ, ಅಗತ್ಯ ಸಮಯಗಳಲ್ಲಿ ರಾಜಕೀಯ ವರದಿಗಾರರೇ ಕಾನೂನು ವರದಿಗಾರರಾಗಿಯೂ ಕೆಲಸ ಮಾಡುತ್ತಾರೆ. ಓದುಗರಿಗೆ ಮತ್ತು ವೀಕ್ಷಕರಿಗೆ ನಿಖರವಾಗಿ ಸುದ್ದಿ ನೀಡಲು ಮಾಧ್ಯಮಗಳು ಪರಿಣತರನ್ನು ಕರೆತರಬೇಕು” ಎಂದು ಅವರು ಹೇಳಿದರು.

"ಇತ್ತೀಚಿನ ದಿನಗಳಲ್ಲಿ ವರದಿ ಮಾಡುವಾಗ ನಾನು ಕಂಡ ಇನ್ನೊಂದು ಪ್ರವೃತ್ತಿ ಏನೆಂದರೆ, ಸುದ್ದಿಯಲ್ಲಿ ಸೈದ್ಧಾಂತಿಕ ನಿಲುವುಗಳು ಮತ್ತು ಪಕ್ಷಪಾತಗಳು ಹರಿದಾಡುತ್ತವೆ. ವಾಸ್ತವಿಕ ವರದಿಗಳಿಗೆ ವ್ಯಾಖ್ಯಾನ ಮತ್ತು ಅಭಿಪ್ರಾಯಗಳು ಬಣ್ಣ ನೀಡುತ್ತಿವೆ. ಅಭಿಮತವುಳ್ಳ ಸುದ್ದಿ ಅಪಾಯಕಾರಿ ಕಲಸುಮೇಲೋಗರ” ಎಂದು ಅವರು ಅಭಿಪ್ರಾಯಪಟ್ಟರು. ಸಂಘರ್ಷದ ರಾಜಕಾರಣ ಮತ್ತು ಪೈಪೋಟಿಯ ಪತ್ರಿಕೋದ್ಯಮದ ಮಾರಕ ಸಂಯೋಜನೆಗಿಂತ ಪ್ರಜಾಪ್ರಭುತ್ವಕ್ಕೆ ಮಾರಕವಾದುದು ಯಾವುದೂ ಇಲ್ಲ ಎಂದು ಅವರು ಹೇಳಿದರು.

ಪತ್ರಿಕಾ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಅವರಿಗೆ ಸಿಜೆಐ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು. “ಅವರು ಮಾಂತ್ರಿಕ ಕಣ್ಣುಗಳಿದ್ದ ವ್ಯಕ್ತಿ. ಈ ಯುಗದ ಅಗ್ರಗಣ್ಯ ಪತ್ರಿಕಾ ಛಾಯಾಗ್ರಾಹಕರಲ್ಲಿ ಒಬ್ಬರು ಎಂಬ ಮಾತಿಗೆ ಸೂಕ್ತವಾಗಿ ಒಂದು ಚಿತ್ರವು ಸಾವಿರ ಪದಗಳನ್ನು ಹೇಳಬಲ್ಲದಾದರೆ ಅವರ ಛಾಯಾಚಿತ್ರಗಳು ಕಾದಂಬರಿಗಳೇ ಆಗಿವೆ” ಎಂದು ನ್ಯಾ. ರಮಣ ಮೆಚ್ಚುಗೆ ಸೂಚಿಸಿದರು.

Kannada Bar & Bench
kannada.barandbench.com