ಮಹಿಳಾ ಉದ್ಯೋಗಿ ಆತ್ಮಹತ್ಯೆ: ಎಸ್‌ಸಿಡಿಸಿಸಿ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

ಆಶಾ ಎಂಬಾಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿದ್ದರು. ಆಕೆ 2024ರ ಮಾರ್ಚ್‌ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪತಿ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Justice H P Sandesh
Justice H P Sandesh

ಉಡುಪಿಯ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ (ಎಸ್‌ಸಿಡಿಸಿಸಿ) ಮಹಿಳಾ ಉದ್ಯೋಗಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ಬ್ಯಾಂಕ್ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಉದಯಕುಮಾರ್ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ಅರ್ಜಿದಾರರು ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮೃತ ಆಶಾ ಅವರು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿದ್ದರು. ಆಕೆ 2024ರ ಮಾರ್ಚ್‌ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ಸಂಬಂಧ ಆಕೆಯ ಪತಿ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆಶಾ ಮಾರ್ಚ್‌ 23ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಆದರೆ, ಆ ದಿನ ಮಧ್ಯಾಹ್ನ 12.30ರ ಸುಮಾರಿಗೆ ಬ್ಯಾಂಕ್ ಮ್ಯಾನೇಜರ್ ಮಹೇಶ್ ರಾವ್‌ ನನಗೆ ಕರೆ ಮಾಡಿ “ನಿಮ್ಮ ಪತ್ನಿ ಕೆಲಸ ಮಧ್ಯಕ್ಕೆ ಬಿಟ್ಟು ಮನೆಗೆ ತೆರಳಿದ್ದಾರೆ” ಎಂದು ತಿಳಿಸಿದ್ದರು. ಕೂಡಲೆ ನಾನು ಮನೆಗೆ ತೆರಳಿ ನೋಡಿದಾಗ ಪತ್ನಿ ಕೋಣೆಯಲ್ಲಿ ನೇಣಿ ಬಿಗಿದುಕೊಂಡಿದ್ದರು. ಆಕೆಯನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮಾರ್ಗಮಧ್ಯೆಯೇ ಆಶಾ ಸಾವನ್ನಪ್ಪಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಬ್ಯಾಂಕ್‌ ಮೇಲ್ವಿಚಾರಕ ಉದಯ ಕುಮಾರ್ ಶೆಟ್ಟಿ, ಆಶಾ ಮೇಲೆ ಹಣದ ವಂಚನೆ ಆರೋಪ ಮಾಡಿದ್ದರು. ಹಣ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದರು. ಹಣ ವಾಪಸ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿದ್ದು, ಇದರಿಂದಾಗಿಯೇ ಆಶಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಪೊಲೀಸರು ಉದಯ ಕುಮಾರ್ ಶೆಟ್ಟಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು. ಬಂಧನ ಭೀತಿ ಎದುರಾದ ಕಾರಣ ನಿರೀಕ್ಷಣಾ ಜಾಮೀನು ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

Kannada Bar & Bench
kannada.barandbench.com