ಹೊಸ ಅಂಚೆ ಮತಪತ್ರ ನಿಯಮಾವಳಿ ಪ್ರಶ್ನಿಸಿದ್ದ ವೈಎಸ್ಆರ್ ಕಾಂಗ್ರೆಸ್: ಚುನಾವಣಾ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ

ರಿಟ್ ಅರ್ಜಿ ವ್ಯಾಪ್ತಿಯಲ್ಲಿ ಪರಿಹಾರ ಕೋರುವ ಬದಲು ಚುನಾವಣಾ ಅರ್ಜಿ ಸಲ್ಲಿಸುವಂತೆ ಅರ್ಜಿ ಸಲ್ಲಿಸಿದ್ದ ಪಕ್ಷಕ್ಕೆ ನ್ಯಾಯಮೂರ್ತಿಗಳಾದ ಕಿರಣ್ಮಯಿ ಮಾಂಡವ ಮತ್ತು ನ್ಯಾಯಪತಿ ವಿಜಯ್ ಅವರಿದ್ದ ಪೀಠ ಹೇಳಿದೆ.
ಹೊಸ ಅಂಚೆ ಮತಪತ್ರ ನಿಯಮಾವಳಿ ಪ್ರಶ್ನಿಸಿದ್ದ ವೈಎಸ್ಆರ್ ಕಾಂಗ್ರೆಸ್: ಚುನಾವಣಾ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ
Published on

ರಾಜ್ಯದಲ್ಲಿ ಅಂಚೆ ಮತಗಳ ಎಣಿಕೆಗೆ ಸಂಬಂಧಿಸಿದ ಹೊಸ ನಿಯಮಾವಳಿ ಜಾರಿ ಪ್ರಶ್ನಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಯಾವುದೇ ಪರಿಹಾರ ನೀಡಲು ಆಂಧ್ರಪ್ರದೇಶ ಹೈಕೋರ್ಟ್ ಶನಿವಾರ ನಿರಾಕರಿಸಿದೆ.

ರಿಟ್ ಅರ್ಜಿ ವ್ಯಾಪ್ತಿಯಲ್ಲಿ ಪರಿಹಾರ ಕೋರುವ ಬದಲು ಚುನಾವಣಾ ಅರ್ಜಿ ಸಲ್ಲಿಸುವಂತೆ ಅರ್ಜಿ ಸಲ್ಲಿಸಿದ್ದ ಪಕ್ಷಕ್ಕೆ ನ್ಯಾಯಮೂರ್ತಿಗಳಾದ ಕಿರಣ್ಮಯಿ ಮಾಂಡವ ಮತ್ತು ನ್ಯಾಯಪತಿ ವಿಜಯ್ ಅವರಿದ್ದ ಪೀಠ ಹೇಳಿದೆ.

ಅರ್ಜಿದಾರರು ಸೂಕ್ತ ರೀತಿಯ ಚುನಾವಣಾ ಅರ್ಜಿ ಮೂಲಕ ಪರಿಹಾರ ಕೋರುವುದಕ್ಕಾಗಿ ಅರ್ಜಿದಾರರ ರಿಟ್‌ ಮನವಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅದು ವಿವರಿಸಿದೆ.

ರಾಜ್ಯದಲ್ಲಿ ಅಂಚೆ ಮತಪತ್ರ ಎಣಿಕೆ ಗುರುತಿಸಲು ಇದ್ದ ನಿಯಮಾವಳಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಸಡಿಲಿಸಿರುವುದನ್ನು ಪ್ರಸ್ನಿಸಿ ವೈಎಸ್‌ಆರ್‌ ಕಾಂಗ್ರೆಸ್‌ ನ್ಯಾಯಾಲಯದ ಮೆಟ್ಟಿಲೇರಿತ್ತು.

ನಿರ್ದಿಷ್ಟವಾಗಿ, ನಿಯಮಾವಳಿ ಪ್ರಕಾರ ನಮೂನೆ 13A ಯಲ್ಲಿ ದೃಢೀಕರಣ ಅಧಿಕಾರಿಯ ಹೆಸರು ಮತ್ತು ಹುದ್ದೆಯನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗಿತ್ತ. ಆದರೆ ಈಗ  ಈಗ ಅಂತಹ ಎಲ್ಲಾ ಅಧಿಕಾರಿಗಳ ಮಾದರಿ ಸಹಿ ಹಾಕುವಂತೆ ಮಾತ್ರ ಹೇಳಲಾಗುತ್ತಿದೆ. ಕಾನೂನಿನ ಕಡ್ಡಾಯ ಅವಶ್ಯಕತೆಗಳಿಗೆ ಬದ್ಧವಾಗಿರದ ಅಂಚೆ ಮತಪತ್ರಗಳನ್ನು ಮಾನ್ಯಗೊಳಿಸುವ ಏಕೈಕ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಚುನಾವಣಾ ಆಯೋಗ ಶಾಸನಬದ್ಧ ನಿಯಮಗಳನ್ನು ತಪ್ಪಾಗಿ ರೂಪಿಸಿದೆ ಎಂದು ವಾದಿಸಿದರು.

ಇಸಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಅವಿನಾಶ್ ದೇಸಾಯಿ, ಸಡಿಲಗೊಳಿಸಿರುವ ನಿಯಮಗಳು ಎಲ್ಲಾ ಅಂಚೆ ಮತಪತ್ರಗಳಿಗೆ ಅನ್ವಯಿಸುವುದಿಲ್ಲ ಎಂದರು.

Kannada Bar & Bench
kannada.barandbench.com