ವೈಯಕ್ತಿಕ ಡಿಜಿಟಲ್‌ ಸಾಧನ ಜಪ್ತಿ ಮಾರ್ಗಸೂಚಿ: ಹೊಸದಾಗಿ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಕೇಂದ್ರ ಸರ್ಕಾರವು ಸಲ್ಲಿಸಿರುವ ಆಕ್ಷೇಪಣೆಯು ಅಪರಿಪೂರ್ಣವಾಗಿದ್ದು, ಸಮಾಧಾನಕರವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
 Justice Sanjay Kishan Kaul and Justice MM Sundresh
Justice Sanjay Kishan Kaul and Justice MM Sundresh
Published on

ವೈಯಕ್ತಿಕ ಡಿಜಿಟಲ್‌ ಮತ್ತು ವಿದ್ಯುನ್ಮಾನ ಸಾಧನಗಳ ಜಫ್ತಿ ಮತ್ತು ಅವುಗಳ ವಿಶ್ಲೇಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳಿಗೆ ಮಾರ್ಗಸೂಚಿ ರೂಪಿಸುವಂತೆ ಕೋರಿ ಶೈಕ್ಷಣಿಕ ವಲಯ ಮತ್ತು ಸಂಶೋಧಕರ ಸಮೂಹ ಸಲ್ಲಿಸಿರುವ ಅರ್ಜಿಗೆ ಹೊಸದಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರತ್ಯುತ್ತರ ಅಫಿಡವಿಟ್‌ ಅಪರಿಪೂರ್ಣವಾಗಿದ್ದು, ಸಮಾಧಾನಕರವಾಗಿಲ್ಲ ಎಂದಿದೆ.

“ಆಕ್ಷೇಪಣೆಯ ಕುರಿತು ನಮಗೆ ಸಮಾಧಾನವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲಿಸುವ ವಿಧಾನಗಳನ್ನು ಉಲ್ಲೇಖಿಸಿ ಸರಿಯಾದ ರೀತಿಯಲ್ಲಿ ಹೊಸದಾಗಿ ಪ್ರತಿಕ್ರಿಯೆ ಸಲ್ಲಿಸಬೇಕು. ಸೆಪ್ಟೆಂಬರ್‌ 26ರಂದು ವಿಚಾರಣೆ ನಡೆಸಲಾಗುವುದು” ಎಂದು ಪೀಠ ಹೇಳಿದೆ.

“ಜಪ್ತಿ ಮಾಡಲಾದ ಸಾಧನಗಳಲ್ಲಿ ವೈಯಕ್ತಿಕ ಮಾಹಿತಿ ಅಥವಾ ಮಾಡಲಾದ ಕೆಲಸದ ವಿವರ ಅಡಕವಾಗಿರುತ್ತದೆ. ಶೈಕ್ಷಣಿಕ ವಲಯದಲ್ಲಿರುವವರ ಜೀವನ ಅದರ ಮೇಲೆ ಅವಲಂಬಿತವಾಗಿರುವುದರಿಂದ ಆ ಕೆಲಸಗಳನ್ನು ಸಂರಕ್ಷಿಸಬೇಕಿದೆ” ಎಂದು ಪೀಠ ಹೇಳಿದೆ.

“ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರತಿಕ್ರಿಯೆ ಅಫಿಡವಿಟ್‌ ಪರಿಪೂರ್ಣವಾಗಿಲ್ಲ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರೇ ದಯಮಾಡಿ ಅದನ್ನು ಪರಿಶೀಲಿಸಬಹುದು. ಈ ಹಂತದ ಅಧಿಕಾರಿಯು ಅದನ್ನು ನೋಡಬಹುದು ಎಂದು ನಮಗನ್ನಿಸುವುದಿಲ್ಲ” ಎಂದು ಪೀಠ ಹೇಳಿದೆ. ಇದನ್ನು ಪರಿಶೀಲಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ಪೀಠಕ್ಕೆ ಭರವಸೆ ನೀಡಿದರು.

ನಾಗರಿಕರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಮಾಹಿತಿ ಒಳಗೊಂಡಿರುವ ಸಾಧನಗಳನ್ನು ತನಿಖಾ ಸಂಸ್ಥೆಗಳು ಯಾವುದೇ ಅಧಿಕಾರ ಇಲ್ಲದಿದ್ದರೂ ವಶಕ್ಕೆ ಪಡೆಯುತ್ತಿವೆ. ಇದಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ನೀಡಬೇಕಿದೆ. ಇತ್ತೀಚೆಗೆ ವಿವಿಧ ಪ್ರಕರಣಗಳಲ್ಲಿ ಶೈಕ್ಷಣಿಕ ವಲಯದ ಹೆಸರಾಂತರಿಂದ ಮೊಬೈಲ್‌ ಮತ್ತಿತರ ಸಾಧನಗಳನ್ನು ಜಫ್ತಿ ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com