ಚೆಕ್ ಅಮಾನ್ಯ ಪ್ರಕರಣ: ಸಿನಿಮಾ ನಿರ್ದೇಶಕ ರಾಜ್ ಕುಮಾರ್ ಸಂತೋಷಿಗೆ 2 ವರ್ಷ ಜೈಲು, 20 ಲಕ್ಷ ದಂಡ

ಸಂತೋಷಿ ಅವರು ಚೆಕ್‌ ಎಕ್ಸಿಕ್ಯೂಷನ್‌ (ಪೂರ್ಣ ಪ್ರಮಾಣದಲ್ಲಿ ಚೆಕ್‌ ವಿತರಣೆ) ಮಾಡಿರುವುದನ್ನು ಒಪ್ಪಿಕೊಂಡಿದ್ದು ಇದು ದೂರುದಾರರಿಂದ ಪಡೆದ ಸಾಲ ತೀರಿಸಲು ಚೆಕ್‌ ನೀಡಲಾಗಿತ್ತು ಎಂದು ಊಹಿಸಲು ಕಾರಣವಾಯಿತು ಎಂದಿದೆ ನ್ಯಾಯಾಲಯ.
ಚೆಕ್ ಬೌನ್ಸ್
ಚೆಕ್ ಬೌನ್ಸ್

ಚೆಕ್ ಅಮಾನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ಚಿತ್ರ ನಿರ್ದೇಶಕ ಹಾಗೂ ʼಹಲ್ಲಾ ಬೋಲ್‌ʼ ʼಲಜ್ಜಾʼ, ʼಪುಕಾರ್‌ʼ ಸಿನಿಮಾ ಖ್ಯಾತಿಯ ರಾಜ್‌ಕುಮಾರ್‌ ಸಂತೋಷಿ ಅವರಿಗೆ ಗುಜರಾತ್‌ನ ಜಾಮ್‌ನಗರದ ನ್ಯಾಯಾಲಯ ಶನಿವಾರ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 20 ಲಕ್ಷ ರೂ ದಂಡ ವಿಧಿಸಿದೆ [ಅಶೋಕ್ ಹರಿದಾಸ್ ಭಾಯ್ ಲಾಲ್ ಮತ್ತು ರಾಜ್ ಕುಮಾರ್ ಪ್ಯಾರೆಲಾಲ್ ಸಂತೋಷಿ ನಡುವಣ ಪ್ರಕರಣ]

ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ (ಎನ್ಐ) ಕಾಯಿದೆಯ ಸೆಕ್ಷನ್ 139ರ ಅಡಿಯಲ್ಲಿ ಚೆಕ್ ಹೊಂದಿರುವವರ ಪರವಾಗಿ ಊಹೆಯನ್ನು ನಿರಾಕರಿಸಲು ಸಂತೋಷಿ ವಿಫಲರಾಗಿದ್ದಾರೆ ಎಂದು ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ವಿಶಾಲ್ ಜಗದೀಶ್‌ಕುಮಾರ್ ಗಾಧವಿ ಅಭಿಪ್ರಾಯಪಟ್ಟರು.

ಅಶೋಕ್ ಹರಿದಾಸ್ ಭಾಯ್ ಲಾಲ್ ಎಂಬುವವರು ತಮ್ಮ ಪವರ್ ಆಫ್ ಅಟಾರ್ನಿ (ಪಿಒಎ) ಹೋಲ್ಡರ್ ಮೂಲಕ ದೂರು ನೀಡಿದ್ದು ಸಂತೋಷಿ ಅವರು ನೀಡಿದ್ದ ರೂ 10 ಲಕ್ಷ ಚೆಕ್‌ ಅಮಾನ್ಯವಾಗಿದೆ ಎಂದಿದ್ದರು. ಲೀಗಲ್‌ ನೋಟಿಸ್‌ ನೀಡಿದ್ದರೂ ಸಂತೋಷಿ ಅವರು ಸಾಲ ಮರುಪಾವತಿಸಲು ವಿಫಲರಾಗಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.

ಆದರೆ ಇದು ಸುಳ್ಳು ದೂರಾಗಿದ್ದು ತಾನು ಯಾವುದೇ ಚೆಕ್‌ ನೀಡಿಲ್ಲ. ಚೆಕ್‌ಗೆ ಸಹಿ ಹಾಕಿರಲಿಲ್ಲ ಅದನ್ನು ಇತ್ಯರ್ಥಗೊಂಡ ವಹಿವಾಟಿಗೆ ಭದ್ರತೆಯ ರೂಪದಲ್ಲಷ್ಟೇ ನೀಡಲಾಗಿತ್ತು ಎಂದು ವಾದಿಸಿದ್ದರು. ಚೆಕ್‌ ದಿನಾಂಕವನ್ನು ಬದಲಿಸಲಾಗಿದೆ ಎಂದು ಕೂಡ ದೂರಿದ್ದ ಅವರು ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಿದ್ದರು.

ಚೆಕ್ ಅನ್ನು ಭದ್ರತೆಯಾಗಿ ನೀಡಲಾಗಿದ್ದು ಅದರ ವಹಿವಾಟು ಪೂರ್ಣಗೊಂಡಿದೆ ಎಂದಿರುವ ಸಂತೋಷಿ ಅದಕ್ಕೆ ಪುರಾವೆಗಳನ್ನು ಒದಗಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.

ವಾಸ್ತವವಾಗಿ, ಈ ಹೇಳಿಕೆಯು ದೂರುದಾರ ಮತ್ತು ಸಂತೋಷಿ ನಡುವೆ ನಿಜವಾಗಿಯೂ ವಹಿವಾಟುಗಳು ಇದ್ದವು. ಅದಕ್ಕಾಗಿಯೇ ಚೆಕ್‌ ಬರೆಯಲಾಗಿದೆ ಎಂಬ ತೀರ್ಮಾನಕ್ಕೆ ಬರಲು ಕಾರಣವಾಯಿತು ಎಂದು ಪೀಠ ತಿಳಿಸಿತು.

ದಾಖಲೆಗಳ ಆಧಾರದಲ್ಲಿ ಸಂತೋಷಿ ಅವರು ಚೆಕ್‌ ಎಕ್ಸಿಕ್ಯೂಷನ್‌ (ಪೂರ್ಣ ಪ್ರಮಾಣದಲ್ಲಿ ಚೆಕ್‌ ವಿತರಣೆ) ಮಾಡಿರುವುದನ್ನು ಒಪ್ಪಿಕೊಂಡಿದ್ದು ಇದು ದೂರುದಾರರಿಂದ ಪಡೆದ ಸಾಲ ತೀರಿಸಲು ಚೆಕ್‌ ನೀಡಲಾಗಿತ್ತು ಎಂದು ಊಹಿಸಲು ಕಾರಣವಾಯಿತು ಎಂದು ನ್ಯಾಯಾಲಯ ತಿಳಿಸಿತು

ಇದಲ್ಲದೆ, ಸಂತೋಷಿ ಅವರು ಒಂದು ಕಡೆ ಚೆಕ್‌ಗೆ ಸಹಿ ಹಾಕಿಲ್ಲ ಎಂದು ಹೇಳಿಕೊಂಡಿದ್ದರೆ, ಮತ್ತೊಂದೆಡೆ, ಅವರ ಸಹಿ ಇರುವ ಚೆಕ್‌ನ ಪುರಾವೆಯನ್ನು ಹಾಜರುಪಡಿಸಿದ್ದಾರೆ ಎಂದು ಅದು ಗಮನಿಸಿತು.

ಅದರಂತೆ ಸಂತೋಷಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು ದೂರುದಾರರಿಗೆ ಪರಿಹಾರವಾಗಿ ರೂ 20 ಲಕ್ಷ ಪಾವತಿಸುವಂತೆ ನಿರ್ದೇಶಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Ashok Haridasbhai Lal vs Rajkumar Pyarelal Santoshi.pdf
Preview
Kannada Bar & Bench
kannada.barandbench.com