ನಿವೃತ್ತ ಪ್ರಾಧ್ಯಾಪಕರ ವೇತನ ಪರಿಷ್ಕರಣೆ ಪ್ರಕರಣ: ಎಎಜಿ ಅಹ್ಮದ್‌ ಸೇವೆಗೆ ಹಣಕಾಸು ಇಲಾಖೆ ಮೆಚ್ಚುಗೆ

“ಎಸ್‌ ಎ ಅಹ್ಮದ್‌ ಅವರ ವೃತ್ತಿ ಬದ್ಧತೆ, ಪ್ರಾಮಾಣಿಕತೆ ಮತ್ತು ಸ್ನೇಹ ಮನೋಭಾವ ಅತ್ಯಂತ ಶ್ಲಾಘನೀಯ” ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಪತ್ರದಲ್ಲಿ ವಿವರಿಸಿದ್ದಾರೆ.
S A Ahmed, Additional Advocate General
S A Ahmed, Additional Advocate General
Published on

ಆರನೇ ಕೇಂದ್ರೀಯ ವೇತನ ಆಯೋಗ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ವೇತನಕ್ಕೆ ಅನುಗುಣವಾಗಿ ನಿವೃತ್ತ ಪ್ರಾಧ್ಯಾಪಕರ ವೇತನವನ್ನು ಪರಿಷ್ಕರಿಸಿ ಅವರ ಪಿಂಚಣಿಯನ್ನು ಪರಿಷ್ಕರಿಸಬೇಕು ಮತ್ತು ಈ ಪರಿಷ್ಕೃತ ಪಿಂಚಣಿಯನ್ನು ನಾಲ್ಕು ಕಂತುಗಳಲ್ಲಿ ಅರ್ಹರಿಗೆ ಪಾವತಿಸಬೇಕು ಎಂದು ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠದಲ್ಲಿ ಬದಿಗೆ ಸರಿಸಲು ಸಮರ್ಥವಾಗಿ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹ್ಮದ್‌ ಅವರಿಗೆ ರಾಜ್ಯ ಹಣಕಾಸು ಇಲಾಖೆಯು ಮೆಚ್ಚುಗೆ ಸೂಚಿಸಿ ಪತ್ರ ಬರೆದಿದೆ.

ರಾಜ್ಯ ಸರ್ಕಾರದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಉಮೇಶ್‌ ಅಡಿಗ ಅವರ ವಿಭಾಗೀಯ ಪೀಠ ಎತ್ತಿ ಹಿಡಿದಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗಲಿದ್ದ ಭಾರಿ ಸಮಸ್ಯೆ ನಿವಾರಣೆಯಾಗಿದೆ ಎಂದು ಪತ್ರದಲ್ಲಿ ಸಂತಸ ವ್ಯಕ್ತಪಡಿಸಲಾಗಿದೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹ್ಮದ್‌ ಅವರು ಕಠಿಣ ಪರಿಶ್ರಮ ಹಾಕಿ, ನಿಷ್ಠೆಯಿಂದ ಕೆಲಸ ಮಾಡಿದ್ದರಿಂದ ಸರ್ಕಾರದ ಪರವಾಗಿ ತೀರ್ಪು ಬಂದಿದೆ. ಇದಕ್ಕಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಎಸ್‌ ಎ ಅಹ್ಮದ್‌ ಅವರಿಗೆ ಮೆಚ್ಚುಗೆ ತಿಳಿಸುವಂತೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.

“ಎಸ್‌ ಎ ಅಹ್ಮದ್‌ ಅವರ ವೃತ್ತಿ ಬದ್ಧತೆ, ಪ್ರಾಮಾಣಿಕತೆ ಮತ್ತು ಸ್ನೇಹ ಮನೋಭಾವ ಅತ್ಯಂತ ಶ್ಲಾಘನೀಯ” ಎಂದು ರಿತೇಶ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ. ಎಜಿ ಮತ್ತು ಎಎಜಿಗಳ ತಂಡಕ್ಕೆ ಹಣಕಾಸು ಇಲಾಖೆಯಿಂದ ವಿನಮ್ರ ವಂದನೆ ತಿಳಿಸಲಾಗುತ್ತದೆ ಎಂದು ಪತ್ರದಲ್ಲಿ ಸಿಂಗ್‌ ವಿವರಿಸಿದ್ದಾರೆ.

Also Read
[ನಿವೃತ್ತ ಪ್ರಾಧ್ಯಾಪಕರ ವೇತನ ಪರಿಷ್ಕರಣೆ] ವೇತನ ಪರಿಷ್ಕರಣೆಯಂದು ಉದ್ಯೋಗದಲ್ಲಿಲ್ಲದವರಿಗೆ ಲಾಭ ಸಿಗದು: ಹೈಕೋರ್ಟ್‌

“ರಾಜ್ಯ ಉನ್ನತ ಶಿಕ್ಷಣ ಪರಿಷತ್‌, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಆದರೆ, ನೌಕರರ ಸೇವಾ ಷರತ್ತುಗಳಿಗೆ ಸಂಬಂಧಪಟ್ಟಂತೆ ನೀಡುವ ಸಲಹೆ ಅಥವಾ ಸೂಚನೆಗಳು ಸರ್ಕಾರಕ್ಕೆ ಬಾಧ್ಯವಲ್ಲ. ಅಂತೆಯೇ, ವೇತನ ಪರಿಷ್ಕರಣೆಯ ದಿನದಂದು ಉದ್ಯೋಗದಲ್ಲಿ ಇಲ್ಲದ ನೌಕರರಿಗೆ ವೇತನ ಪರಿಷ್ಕರಣೆಯ ಲಾಭ ದೊರಕುವುದಿಲ್ಲ” ಹೈಕೋರ್ಟ್‌ನ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಎಸ್‌ ಎ ಅಹ್ಮದ್‌ ಅವರು “ಏಕಸದಸ್ಯ ಪೀಠವು ಏಕರೂಪ ಪಿಂಚಣಿ ಪರಿಷ್ಕರಣೆ ನೀತಿ ರೂಪಿಸಿ ಎಂದು 2019ರ ಮಾರ್ಚ್‌ 23ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆದರೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ₹477 ಕೋಟಿಗೂ ಹೆಚ್ಚಿನ ಹೊರೆಯಾಗುತ್ತದೆ” ಎಂದು ವಾದಿಸಿದ್ದರು.

Attachment
PDF
Finance Dept to S A Ahmed
Preview
Kannada Bar & Bench
kannada.barandbench.com