ಸುಸ್ತಿದಾರರ ವಾಹನವನ್ನು ರಿಕವರಿ ಏಜೆಂಟ್, ಗೂಂಡಾಗಳ ಮೂಲಕ ಬಲವಂತವಾಗಿ ಜಪ್ತಿ ಮಾಡುವಂತಿಲ್ಲ: ಪಾಟ್ನಾ ಹೈಕೋರ್ಟ್

ವಾಹನ ಜಪ್ತಿ ಮಾಡುವ ಮೂಲಕ ಸಾಲ ವಸೂಲಾತಿಗೆ ಖಾಸಗಿ ಅಧಿಕಾರ ಚಲಾಯಿಸಲು ಬಯಸುವ ಹಣಕಾಸು ಸಂಸ್ಥೆಗಳು ಸಾಂವಿಧಾನಿಕ ಮಿತಿಯಲ್ಲಷ್ಟೇ ತಮ್ಮ ಹಕ್ಕು ಚಲಾಯಿಸಬಹುದು ಎಂದು ನುಡಿದ ನ್ಯಾಯಾಲಯ.
Patna High Court
Patna High Court

ಸಾಲ ವಸೂಲಾತಿ ಏಜೆಂಟ್‌ಗಳು ಗೂಂಡಾಗಳ ಮೂಲಕ ಸುಸ್ತಿದಾರರ ವಾಹನಗಳನ್ನು ಬಲವಂತವಾಗಿ ಜಪ್ತಿ ಮಾಡುವಂತಿಲ್ಲ. ಅಂತಹ ಕೃತ್ಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಧನಂಜಯ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಹಣಕಾಸಿನ ನೆರವು ಪಡೆದು ಖರೀದಿಸಿದ ವಾಹನಗಳನ್ನು ಕಾನೂನಿನಿಗೆ ಹೊರತಾಗಿ ಜಪ್ತಿ ಮಾಡಲಾಗಿದೆ ಎಂಬುದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಜಿದಾರರ ಸಾಮಾನ್ಯ ಅಹವಾಲಾಗಿತ್ತು.

ಆರ್‌ಬಿಐ ಮಾರ್ಗಸೂಚಿ ಮತ್ತು ಕಾನೂನು ಪಾಲಿಸದೆ ವಾಹನಗಳನ್ನು ಜಪ್ತಿ ಮಾಡುವುದು ಇಲ್ಲವೇ ಮರುಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪೆನಿಗಳ ಬಗ್ಗೆ ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್ ಅವರು ಮೇ 19ರಂದು ನೀಡಿದ ತೀರ್ಪಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Also Read
ಆಸ್ತಿಯ ಮೇಲೆ ತಂದೆ ಸಾಲ ಮಾಡಿದ್ದನ್ನು ತೀರಿಸಿದರೂ ಪುತ್ರನಿಗೆ ಸ್ವತಂತ್ರ ಹಕ್ಕು ಸ್ಥಾಪನೆಯಾಗದು: ಹೈಕೋರ್ಟ್‌

“ಈ ಪ್ರಕರಣಗಳಲ್ಲಿ ಪ್ರತಿವಾದಿಗಳಾಗಿರುವ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪೆನಿಗಳು ಕಾನೂನು ಉಲ್ಲಂಘಿಸಿ ವರ್ತಿಸಬಾರದೆಂಬ ಸಾಂವಿಧಾನಿಕ ಹೊಣೆಗಾರಿಕೆಗೆ ಒಳಪಟ್ಟಿವೆ. ದೇಶದ ಮೂಲಭೂತ ತತ್ವಗಳು ಮತ್ತು ನೀತಿಗಳಿಗೆ ಅವು ವ್ಯತಿರಿಕ್ತವಾಗಿ ವರ್ತಿಸುವಂತಿಲ್ಲ, ಅಂದರೆ‌ ಕಾನೂನಿನಿಂದ ಸ್ಥಾಪಿತ ಕಾರ್ಯವಿಧಾನ ಪಾಲಿಸದೆ ಯಾವುದೇ ವ್ಯಕ್ತಿಯನ್ನು ಆತನ ಜೀವನೋಪಾಯದಿಂದ ವಂಚಿತನನ್ನಾಗಿ ಮಾಡುವಂತಿಲ್ಲ" ಎಂದಿರುವ ನ್ಯಾಯಾಲಯ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಜಪ್ತಿ ಹಕ್ಕಿಗೆ ಹೋಲಿಸಿದರೆ ವ್ಯಕ್ತಿ/ಅರ್ಜಿದಾರರಿಗೆ ಸಂವಿಧಾನದತ್ತವಾಗಿ ದೊರೆತಿರುವ ಜೀವಿಸುವ ಹಕ್ಕು ಮಿಗಿಲು ಎಂಬುದಾಗಿ ತಿಳಿಸಿದೆ.

ಪ್ರತಿವಾದಿಗಳು ತಮ್ಮ ವಾಹನಗಳ ಎಲ್ಲಾ ದಾಖಲೆಗಳನ್ನು ಮರಳಿಸುವಂತೆ ಕೋರಿ ಅರ್ಜಿದಾರರು ವಿವಿಧ ಮನವಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ ತಮಗಾದ ಮಾನನಷ್ಟಕ್ಕೆ ಪರಿಹಾರವನ್ನೂ ಅವರು ಕೋರಿದ್ದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ವಾಹನ ಜಪ್ತಿ ಮಾಡುವ ಮೂಲಕ ಸಾಲ ವಸೂಲಾತಿಗೆ ಖಾಸಗಿ ಅಧಿಕಾರ ಚಲಾಯಿಸಲು ಬಯಸುವ ಹಣಕಾಸು ಸಂಸ್ಥೆಗಳು ಸಾಂವಿಧಾನಿಕ ಮಿತಿಯಲ್ಲಷ್ಟೇ ತಮ್ಮ ಹಕ್ಕು ಚಲಾಯಿಸಬಹುದು ಎಂದು ತೀರ್ಪು ನೀಡಿದೆ.   

Related Stories

No stories found.
Kannada Bar & Bench
kannada.barandbench.com