ಆರ್ಥಿಕ ಸದೃಢತೆಯ ಅಂಶವೊಂದೇ ಮಗುವಿನ ಸುಪರ್ದಿಯ ವಿಚಾರ ನಿರ್ಧರಿಸಲು ಆಧಾರವಾಗದು: ಹೈಕೋರ್ಟ್‌

ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್‌.
Justices Anu Sivaraman & Anant Ramanath Hegde
Justices Anu Sivaraman & Anant Ramanath Hegde

ಆರ್ಥಿಕ ಸದೃಢತೆ ಅಂಶವೊಂದೇ ಮಗುವಿನ ಸುಪರ್ದಿ ವಿಚಾರವನ್ನು ನಿರ್ಧರಿಸಲು ಆಧಾರವಾಗುವುದಿಲ್ಲ ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಹಣಕಾಸಿನ ಸಾಮರ್ಥ್ಯ ಹೊಂದಿರುವುದರಿಂದ 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಅನಂತ ರಾಮನಾಥ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿತು.

“ಹಣಕಾಸಿನ ಸಾಮರ್ಥ್ಯವೊಂದೇ ಮಗುವಿನ ಸುಪರ್ದಿ ವಿಚಾರ ನಿರ್ಧರಿಸಲು ಆಧಾರವಾಗುವುದಿಲ್ಲ. ಇದೇ ಅಭಿಪ್ರಾಯ ವ್ಯಕ್ತಪಡಿಸಿ ಕೌಟುಂಬಿಕ ನ್ಯಾಯಾಲಯವು ಮೇಲ್ಮನವಿದಾರರ ಪತಿಯ ಅರ್ಜಿ ವಜಾಗೊಳಿಸಿದೆ. ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯ ಹಾಗೂ ಆದೇಶವನ್ನು ಕಾನೂನುಬಾಹಿರ ಎಂದು ಹೇಳಲಾಗದು. ಇನ್ನೂ ಮೇಲ್ಮನವಿದಾರನೊಂದಿಗೆ ಪುತ್ರಿ ಸುಪರಿಚಿತವಾಗಿದ್ದಾರೆ (ಫೆಮಿಲಿಯರ್‌) ಎನ್ನುವುದನ್ನು ಸಾಬೀತುಪಡಿಸುವ ದಾಖಲೆಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಿಲ್ಲ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲು ಸಕಾರಣ ಕಂಡುಬರುತ್ತಿಲ್ಲ” ಎಂದು ಪೀಠ ಹೇಳಿದೆ.

“ಮಗಳ ಭೇಟಿ ಹಕ್ಕು ಕೋರಲು ಮತ್ತು ಮಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆಗೆ ಹಣಕಾಸಿನ ಸೌಲಭ್ಯ ಒದಗಿಸಲು ಅವಕಾಶ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಲು ಮೇಲ್ಮನವಿದಾರ ಸ್ವತಂತ್ರರಾಗಿದ್ದಾರೆ” ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪತಿ ಪರ ವಕೀಲರು ಮೇಲ್ಮನವಿದಾರರು ಉತ್ತಮ ವೇತನದ ಉದ್ಯೋಗ ಹೊಂದಿದ್ದಾರೆ. ಹಣಕಾಸಿನ ಸಾಮರ್ಥ್ಯ ಉತ್ತಮವಾಗಿದ್ದು, ಮಗುವನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಮೇಲ್ಮನವಿದಾರರ ಸುಪರ್ದಿಗೆ ಮಗಳನ್ನು ನೀಡುವುದರಿಂದ ಆಕೆಯ ಹಿತರಕ್ಷಣೆ ಮಾಡಿದಂತಾಗುತ್ತದೆ ಎಂದು ಕೋರಿದ್ದರು.

ಪತ್ನಿ ಪರ ವಕೀಲರು, 2013ರಲ್ಲಿ ಡಿಸೆಂಬರ್‌ 12ರಂದು ಮೇಲ್ಮನವಿದಾರ ಮರು ಮದುವೆಯಾಗಿದ್ದಾರೆ. ಮಗಳ ಪರವಾಗಿ ನಾನು (ಪತ್ನಿ) ಮೇಲ್ಮನವಿದಾರನ ಆಸ್ತಿಯಲ್ಲಿ ಪಾಲು ಕೋರಿ ದಾವೆ ಹೂಡಿದ್ದೆ. ಆ ನಂತರ ಮಗಳ ಸುಪರ್ದಿಗೆ ಕೋರಿ ಮೇಲ್ಮನವಿದಾರ ಅರ್ಜಿ ಸಲ್ಲಿಸಿದ್ದಾರೆ. ಈ ಅಂಶ ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಮೇಲ್ಮನವಿದಾರ ಮಗಳ ಭೇಟಿಗೆ ಕೋರಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಪೀಠದ ಗಮನಕ್ಕೆ ತಂದಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ದಂಪತಿ 2008ರ ಏಪ್ರಿಲ್‌ 27ರಂದು ಮದುವೆಯಾಗಿದ್ದು, 2009ರ ಸೆಪ್ಟೆಂಬರ್‌ 29ರಂದು ಪುತ್ರಿ ಜನಿಸಿದ್ದಳು. ಕೌಟುಂಬಿಕ ವ್ಯಾಜ್ಯದಿಂದ 2010ರ ನಂತರ ಪತ್ನಿಯು ಪತಿಯಿಂದ ಬೇರ್ಪಟ್ಟು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ವಿಚ್ಛೇದನ ಕೋರಿ ಪತ್ನಿ 2011ರಲ್ಲಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು 2012ರಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿತ್ತು.

ಬಳಿಕ ಮಗಳನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ಪತಿಯು ಪೋಷಕರು ಮತ್ತು ಪಾಲಕರ ಕಾಯಿದೆ 1890ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿ ನೆಲಮಂಗಲದ ಕೌಟುಂಬಿಕ ಹಿರಿಯ ಸಿವಿಲ್‌ ನ್ಯಾಯಾಲಯವು 2019ರ ಡಿಸೆಂಬರ್‌ 19ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಹಾಗೂ ಮಗಳನ್ನು ತನ್ನ ಸುಪರ್ದಿಗೆ ನೀಡಿ ಆದೇಶಿಸಬೇಕು ಎಂದು ಕೋರಿ ಪತಿಯು 2021ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com