ಸೆಪ್ಟೆಂಬರ್‌ನಲ್ಲಿ ನಡೆದಿದ್ದ ರಾಜಕೀಯ ಸಮಾವೇಶದಲ್ಲಿ ಮಾಸ್ಕ್ ಧರಿಸದ ಸಂಸದ ತೇಜಸ್ವಿ ಸೂರ್ಯ ಅವರಿಗೆ 250 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸೋಮವಾರ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ವಿವರಿಸಿದೆ.
ತೇಜಸ್ವಿ ಸೂರ್ಯ ಅವರು ನವೆಂಬರ್ 7ರಂದು ದಂಡ ಪಾವತಿಸಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ತಿಳಿಸಿದೆ. ನವೆಂಬರ್ 12ಕ್ಕೆ ವಿಚಾರಣೆ ಮುಂದೂಡಲಾಗಿದೆ
ಕರ್ನಾಟಕ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ರ ಅಡಿ ಹೊಸದಾಗಿ ರೂಪಿಸಲಾಗಿರುವ ನಿಯಂತ್ರಣ ಕ್ರಮಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿದೆ.
ಕೇಂದ್ರ ಗೃಹ ಇಲಾಖೆ ಮೂರ್ಗಸೂಚಿಯ ಅನ್ವಯ ಕೋವಿಡ್ ನಿರ್ವಹಣೆಗೆ ರಾಷ್ಟ್ರೀಯ ಸೂಚನೆಗಳನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ರಾಜಕೀಯ ಸಭೆಯಲ್ಲಿ ಮಾಸ್ಕ್ ಧರಿಸಿದೇ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಹಾಗೂ ಮತ್ತಿತರ ನಾಯಕರಿಂದ ದಂಡ ವಸೂಲಿ ಮಾಡಲಾಗಿದೆಯೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತ್ತು. “ಮಾಸ್ಕ್ ಧರಿಸದ ಲೋಕಸಭಾ ಸದಸ್ಯ (ತೇಜಸ್ವಿ ಸೂರ್ಯ) ಮತ್ತು ಇತರೆ ನಾಯಕರಿಂದ ದಂಡ ವಸೂಲಿ ಮಾಡಿದ್ದೀರೇ? ಜನತೆಗೆ ಯಾವ ಸಂದೇಶ ರವಾನಿಸುತ್ತಿದ್ದೀರಿ?" ಎಂದು ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿತ್ತು.