ಪಂಚನಾಮೆ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗದು: ಹೈಕೋರ್ಟ್

ಯಾವುದೇ ಆರೋಪ ಎದುರಾದಲ್ಲಿ ಮಾಹಿತಿದಾರರು ಸಹಿ ಹಾಕಿ ನೀಡಿದ ದೂರಿನಿಂದ ಎಫ್‌ಐಆರ್ ದಾಖಲಿಸಬಹುದಾಗಿದೆ. ಪಂಚನಾಮೆಯನ್ನು ದೂರು ಎನ್ನಲಾಗದು, ಅದರ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗದು ಎಂದ ನ್ಯಾಯಾಲಯ.
Karnataka High Court
Karnataka High Court

ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪಿಗಳಿಂದ ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಂಡು ಪಂಚನಾಮೆ ನಡೆಸಿದ್ದ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಇಬ್ಬರು ಆರೋಪಿಗಳಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದೆ.

ಕಾನೂನುಬಾಹಿರವಾಗಿ ಮದ್ಯಸಾಗಾಟ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ದಯಾನಂದ ಮತ್ತು ರವಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಯಾವುದೇ ಆರೋಪ ಎದುರಾದಲ್ಲಿ ಮಾಹಿತಿದಾರರು ಸಹಿ ಹಾಕಿ ನೀಡಿದ ದೂರಿನಿಂದ ಎಫ್‌ಐಆರ್ ದಾಖಲಿಸಬಹುದಾಗಿದೆ. ಇಲ್ಲವೇ, ನಿಖರ ಮಾಹಿತಿಯ ಆಧಾರದಲ್ಲಿ ಪೊಲೀಸ್ ಅಧಿಕಾರಿ ದೂರು ದಾಖಲಿಸಿಕೊಂಡು ಎಫ್‌ಐಆರ್‌ ದಾಖಲಿಸುತ್ತಾರೆ. ಈ ಎರಡರಲ್ಲಿಯೂ ಮಾಹಿತಿಯನ್ನು ಮೊದಲು ಲಿಖಿತವಾಗಿ ದಾಖಲಿಸಿಕೊಂಡು ನಂತರ ತನಿಖೆ ನಡೆಸುತ್ತಾರೆ.

ಆದರೆ, ಪ್ರಸ್ತುತ ಪ್ರಕರಣದಲ್ಲಿ ಈ ಪ್ರಕ್ರಿಯೆ ನಡೆದಿಲ್ಲ. ಬದಲಿಗೆ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರಿಂದ ಮದ್ಯ ವಶಪಡಿಸಿಕೊಂಡು ಪಂಚನಾಮೆ ನಡೆಸಿದ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದು ಕಾನೂನುಬಾಹಿರ ಕ್ರಮ. ಈ ಅಂಶ ಪರಿಗಣಿಸದೆ ಶಿಕ್ಷೆ ವಿಧಿಸಿರುವುದು ದೋಷದಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಹುಣಸೂರಿನ ಅಬಕಾರಿ ವಿಭಾಗದ ಸಬ್ ಇನ್‌ಸ್ಪೆಕ್ಟರ್‌ 2008 ನವೆಂಬರ್ 24ರಂದು ಬೆಳಿಗ್ಗೆ 10.15ರ ಸಮಯದಲ್ಲಿ ಚಲ್ಲಹಳ್ಳಿ ಗ್ರಾಮದ ಬಳಿ ಸಿಬ್ಬಂದಿಯೊಂದಿಗೆ ಗಸ್ತು ತಿರುಗುವ ವೇಳೆ ಮೂಲಗಳಿಂದ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ಮದ್ಯ ಸಾಗಾಟ ಮಾಡುತ್ತಿರುವ ವಿಚಾರ ಗೊತ್ತಾಗಿತ್ತು.

ಈ ಸಂಬಂಧ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಆರೋಪಿಯ ವಾಹನದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಪಡೆದುಕೊಂಡಿದ್ದ ದಾಖಲೆ ಪರಿಶೀಲಿಸಿದರು. ಈ ಕುರಿತು ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ವಾಹನ ಜಪ್ತಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದರು.

180 ಎಂಎಲ್‌ನ 48 ಒರಿಜಿನಲ್ ಚಾಯ್ಸ್‌ನ ವಿಸ್ಕಿ ಬಾಟಲ್ ವಶಪಡಿಸಿಕೊಂಡಿದ್ದರು. ಇದಾದ ಬಳಿಕ ವಶಕ್ಕೆ ಪಡೆದಿದ್ದ ಮದ್ಯವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ ಆರೋಪಿಗಳ ವಿರುದ್ದ ತನಿಖೆ ನಡೆಸಿ ಹುಣಸೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳಿಗೆ 5 ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿತ್ತು. ಈ ಆದೇಶವನ್ನು ಮೈಸೂರಿನ ಸತ್ರ ನ್ಯಾಯಾಲಯ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿದ್ದರು.

Related Stories

No stories found.
Kannada Bar & Bench
kannada.barandbench.com