ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್‌ ಕಿಶೋರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಬೆಂಗಳೂರಿನ ವಕೀಲ ಭಕ್ತವತ್ಸಲ ಅವರು ನೀಡಿದ ದೂರಿನ ಮೇರೆಗೆ ವಿಧಾನ ಸೌಧ ಠಾಣೆಯಲ್ಲಿ ರಾಕೇಶ್‌ ಕಿಶೋರ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 132, 133 ಅಡಿ ಪ್ರಕರಣ ದಾಖಲಾಗಿದೆ.
ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್‌ ಕಿಶೋರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲು
Published on

ಸರ್ಕಾರಿ ಸೇವಕರ ಅಧಿಕೃತ ಕೃತ್ಯಕ್ಕೆ ಅಡ್ಡಿಪಡಿಸುವ ಮತ್ತು ವ್ಯಕ್ತಿಯನ್ನು ಅವಮಾನಿಸುವ ಆರೋಪದ ಮೇಲೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತುಗೊಂಡಿರುವ ವಕೀಲ ರಾಕೇಶ್‌ ಕಿಶೋರ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರಿನ ವಕೀಲ ಭಕ್ತವತ್ಸಲ ಅವರು ನೀಡಿದ ದೂರಿನ ಮೇರೆಗೆ ವಿಧಾನ ಸೌಧ ಠಾಣೆಯಲ್ಲಿ ರಾಕೇಶ್‌ ಕಿಶೋರ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 132, 133 ಅಡಿ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ, ಹೈಕೋರ್ಟ್‌ನ ಗೋಲ್ಡನ್‌ ಜ್ಯುಬಿಲಿ ಗೇಟ್‌ ಮುಂಭಾಗ ಬೆಂಗಳೂರು ವಕೀಲರ ಸಂಘವು ಪ್ರತಿಭಟನೆ ನಡೆಸಿತ್ತು. ರಾಜ್ಯದಾದ್ಯಂತ ವಕೀಲರು ಮತ್ತು ನಾಗರಿಕ ಸಂಘಟನೆಗಳು ರಾಕೇಶ್‌ ಕಿಶೋರ್‌ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕಳೆದ ಸೋಮವಾರ ರಾಕೇಶ್‌ ಕಿಶೋರ್‌ ನ್ಯಾಯಾಲಯ ಕಲಾಪದಲ್ಲಿ ಸಿಜೆಐ ತೊಡಗಿದ್ದ ವೇಳೆ ಅವರೆಡೆಗೆ ತನ್ನ ಶೂ ಎಸೆಯಲು ಯತ್ನಿಸಿದ್ದ. ಆದರೆ, ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರಗೆ ಕರೆದೊಯ್ದರು. ಹಾಗೆ ಕರೆದೊಯ್ಯುವ ವೇಳೆ ಆತ "ಸನಾತನ್‌ ಕಾ ಅಪಮಾನ್‌ ನಹೀ ಸಹೇಂಗೆ" (ಸನಾತನಕ್ಕೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದ.

ಇದರ ಬೆನ್ನಿಗೇ ಸಿಜೆಐ ಅವರು "ಇದೆಲ್ಲದರಿಂದ ವಿಚಲಿತರಾಗಬೇಡಿ. ನಾನು ಸಹ ವಿಚಲಿತನಾಗುವುದಿಲ್ಲ. ಇಂತಹ ಘಟನೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದಿದ್ದರು.

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ನೀಡಿದ್ದ ಹೇಳಿಕೆ ಇಂದಿನ ಘಟನೆಗೆ ಕಾರಣ ಎನ್ನಲಾಗಿದೆ.

Also Read
ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ: ಇದೆಲ್ಲಾ ಪರಿಣಾಮ ಬೀರದು ಎಂದು ನ್ಯಾ. ಗವಾಯಿ ಪ್ರತಿಕ್ರಿಯೆ

ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ಹೇಳಿದ್ದದ್ದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಕೆಲವರು ಬಿಂಬಿಸಿದ್ದರು. ಆದರೆ ತಾನು ಅಗೌರವ ತೋರಿಲ್ಲ ಎಂದು ಸಿಜೆಐ ನಂತರ ತಿಳಿಸಿದ್ದರು. "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ... ಇದು (ಅಪಪ್ರಚಾರ) ಸಾಮಾಜಿಕ ಮಾಧ್ಯಮದಲ್ಲಿ ನಡೆದಿದೆ" ಎಂದಿದ್ದರು.

Kannada Bar & Bench
kannada.barandbench.com