ಸೈಬರ್ ವಂಚನೆಯಿಂದಾಗಿ ಸುಮಾರು ₹ 50,000 ಕಳೆದುಕೊಂಡ ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್ ಡಿ ಧನುಕಾ ಅವರು ಡಿಸೆಂಬರ್ 18ರಂದು ಮುಂಬೈ ಪೊಲೀಸ್ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಡಿ (ಕಂಪ್ಯೂಟರ್ ಮೂಲದ ಮುಖೇನ ವ್ಯಕ್ತಿಗತವಾಗಿ ಮೋಸ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನವೆಂಬರ್ 27ರಂದು ಅಪರಿಚಿತ ಸಂಖ್ಯೆಯಿಂದ ತಮ್ಮ ಮೊಬೈಲ್ ಫೋನ್‌ಗೆ ಸಂದೇಶ ಬಂದಿತ್ತು. ರಾಷ್ಟ್ರೀಕೃತ ಬ್ಯಾಂಕಿಗೆ ನೀಡಲಾಗಿರುವ ಪ್ಯಾನ್ ಕಾರ್ಡ್ ವಿವರಗಳನ್ನು ನವೀಕರಿಸಲು ವಿಫಲವಾದರೆ, ತಮ್ಮ ಖಾತೆ ನಿಷ್ಕ್ರಿಯಗೊಳಿಸಲಾಗುವುದು ಎಂಬುದಾಗಿ ಲಿಂಕ್ ಇರುವ ಸಂದೇಶದಲ್ಲಿ ತಿಳಿಸಲಾಗಿತ್ತು ಎಂದು ನ್ಯಾಯಮೂರ್ತಿ ಧನುಕಾ ದೂರಿನಲ್ಲಿ ವಿವರಿಸಿದ್ದಾರೆ.
ಲಿಂಕ್ ಕ್ಲಿಕ್ಕಿಸಿ ಜಾಲತಾಣದಲ್ಲಿ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿದರು. ನಂತರ ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ 49,998 ರೂ ವಹಿವಾಟು ನಡೆದಿದೆಯೇ ಎಂದು ಪ್ರಶ್ನಿಸಿದಾಗ ನ್ಯಾಯಮೂರ್ತಿಗಳು ಇಲ್ಲ ಎಂದು ಪ್ರತಿಕ್ರಿಯಿಸಿದರು. ಆಗ ಬ್ಯಾಂಕ್ ಪ್ರತಿನಿಧಿ ಹಣವನ್ನು ಖಾತೆಯಿಂದ ಬಿಡಿಸಿಕೊಳ್ಳಲಾಗಿದ್ದು ಇದು ಸೈಬರ್ ವಂಚನೆಯಾಗಿರಬಹುದು. ಹೀಗಾಗಿ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರು ಎಂದು ನ್ಯಾ. ಧನುಕಾ ತಿಳಿಸಿದ್ದಾರೆ.
ಅದರಂತೆ, ನ್ಯಾ. ಧನುಕಾ ಅವರು ಡಿಸೆಂಬರ್ 18ರಂದು ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.