![[ಸದನ ಅವಲೋಕನ] ಕರ್ನಾಟಕ ಸಾರ್ವಜನಿಕ ಪರೀಕ್ಷೆ, ಜಿಎಸ್‌ಟಿ ಸೇರಿ ಐದು ವಿಧೇಯಕ ಮಂಡನೆ](http://media.assettype.com/barandbench-kannada%2F2022-12%2F0be2e759-fb42-4e78-ae4c-c13bb4c23741%2FWhatsApp_Image_2022_12_20_at_12_14_17__1_.jpeg?w=480&auto=format%2Ccompress&fit=max)
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಮಂಗಳವಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ್ದು, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಮತ್ತು ಕರ್ನಾಟಕ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದ್ದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ: ಕರ್ನಾಟಕ ಹೈಕೋರ್ಟ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕುಗಳನ್ನು ಹೊರತುಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಅವುಗಳ ಜನಸಂಖ್ಯೆ ಅನುಪಾತದಲ್ಲಿ ಚುನಾವಣೆಗಾಗಿ ಜನಸಂಖ್ಯೆ ಮಿತಿ ನಿಯಮಿಸಿ, ಕಾಲಮಿತಿಯೊಳಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ನಿರ್ದೇಶಿಸಿರುವುದನ್ನು ಪಾಲಿಸುವುದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993 ಕರ್ನಾಟಕ ಅಧಿನಿಯಮ ಸಂಖ್ಯೆ 14) ಅನ್ನು ತಿದ್ದುಪಡಿ ಮಾಡುವುದು ಅವಶ್ಯಕ ಎಂದು ಪರಿಗಣಿಸಲಾಗಿದೆ.
ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ: ಕರಾವಳಿ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸುವುದು ಅವಶ್ಯ ಎಂದು ಪರಿಗಣಿಸಲಾಗಿದೆ. ಮಲೆನಾಡು ಪ್ರದೇಶದ ವ್ಯಾಖ್ಯಾನದೊಳಗಿನಿಂದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರಗಿಡಲು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧಿನಿಯಮ 1991 ಅನುಸೂಚಿಗೆ ತಿದ್ದುಪಡಿ ಮಾಡುವುದು ಅವಶ್ಯ ಎಂದು ಪರಿಗಣಿಸಲಾಗಿದೆ.
ಈ ಪ್ರದೇಶವನ್ನು ರಾಜ್ಯದ ಇತರೆ ಭಾಗಗಳ ಮಟ್ಟಕ್ಕೆ ತರುವುದಕ್ಕಾಗಿ ಅಭಿವೃದ್ಧಿ ಕಾರ್ಯದ ಹಂತವನ್ನು ತ್ವರಿತಗೊಳಿಸಲು ಒಂದು ಸಮಗ್ರ ಶಾಸನವನ್ನು ಮಾಡುವುದು ಅವಶ್ಯಕ ಎಂದು ಪರಿಗಣಿಸಿ ವಿಧೇಯಕ ಮಂಡಿಸಲಾಗಿದೆ.
1) ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆ 2) ಒಂದು ಅನುಷ್ಠಾನ ಸಮಿತಿ ರಚನೆ 3) ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಒಂದು ಯೋಜನೆ ಸಿದ್ಧಪಡಿಸಲು ಅಭಿವೃದ್ಧಿ ಸ್ಕೀಮುಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಮತ್ತು ಆ ಪ್ರದೇಶದಲ್ಲಿನ ಅಭಿವೃದ್ಧಿ ಇಲಾಖೆಗಳು ಹಾಗೂ ಜಿಲ್ಲಾ ಪರಿಷತ್‌ಗಳ ಕಾರ್ಯ ನಿರ್ವಹಣೆ ಸಮನ್ವಯಗೊಳಿಸಲು ಮಂಡಳಿಗೆ ಅಧಿಕಾರ ನೀಡುವುದು 4) ಮಂಡಳಿಗಾಗಿ ರಾಜ್ಯ ಯೋಜನೆಯಲ್ಲಿ ಹಣಕಾಸು ಹಂಚಿಕೆಗೆ ಉಪಬಂಧವನ್ನು ವಿಧೇಯಕ ಕಲ್ಪಿಸಲಿದೆ.
ಕರ್ನಾಟಕ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ: ಕರ್ನಾಟಕ ವೈದ್ಯಕೀಯ ಕೋರ್ಸುಗನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ 2012ರ ಪ್ರಕರಣ 3, 4 ಮತ್ತು 5 ಅನ್ನು 1) ಇಲಾಖೆಯಲ್ಲಿ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದಂತೆ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಿಗೆ ವೈದ್ಯರನ್ನು ಕೌನ್ಸಿಲಿಂಗ್ ಮೂಲಕ ಕಡ್ಡಾಯವಾಗಿ ಸ್ಥಳ ನಿಯುಕ್ತಿಗೊಳಿಸುವುದನ್ನು ನಿರ್ಬಂಧಿಸಲು ಮತ್ತು ಸ್ಟೈಪಂಡ್ ಅನ್ನು ಸರ್ಕಾರ ನಿರ್ಧರಿಸಲು 2) ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿಸಲು ತಿದ್ದುಪಡಿ ಮಾಡುವುದನ್ನು ಅವಶ್ಯಕ ಎಂದು ಪರಿಗಣಿಸಿ ವಿಧೇಯಕ ಮಂಡಿಸಲಾಗಿದೆ
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ: 2023ರ ಆಗಸ್ಟ್ 2ರಂದು ನಡೆದ ಜಿಎಸ್‌ಟಿ ಪರಿಷತ್‌ನ 51ನೇ ಸಭೆಯ ಶಿಫಾರಸ್ಸುಗಳ ಅನ್ವಯ ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಮನಿ ಗೇಮಿಂಗ್ ನಿರ್ದಿಷ್ಟಪಡಿಸಿದ ಕ್ರಮಾರ್ಹ ಕ್ಲೇಮುಗಳ ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಮತ್ತು ಅನುಸೂಚಿ 3ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಅದನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮದ ಮೂಲಕ ಸೇರಿಸಲಾಗಿದೆ.
2023ರ ಅಕ್ಟೋಬರ್ 1ರಂದು ಅನ್ವಯಿಸುವಂತೆ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ಸಂವಾದಿ ತಿದ್ದುಪಡಿಗಳನ್ನು ಸೇರಿಸುವಂತೆ ಆಗಸ್ಟ್ 11ರಂದು ಜಿಎಸ್‌ಟಿ ಪರಿಷತ್ ಸಚಿವಾಲಯದ ಹೇಳಿದೆ. ಹೀಗಾಗಿ, ತಿದ್ದುಪಡಿ ಮಾಡಲು ಅವಶ್ಯಕ ಎಂದು ಪರಿಗಣಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ: ಕರ್ನಾಟಕದ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆಯು ಮಿತಿ ಮೀರುತ್ತಿವೆ. ಇದು ನೀಚರಿಗೆ ಮತ್ತು ನಿಹಿತ ಹಿತಾಸಕ್ತಿಗಳಿಗೆ ಅಗಾಧ ಹಣಕಾಸು ಅನುಕೂಲ ಕಲ್ಪಿಸುವುದಲ್ಲದೇ ರಾಜ್ಯ ಯುವ ಜನತೆಯ ಪ್ರಗತಿಗೆ ಅವಕಾಶ ಕುಂಠಿತಗೊಳಿಸುತ್ತಿದೆ. ಈ ಅಕ್ರಮ ಜಾಲವು ನ್ಯಾಯ ಸಮ್ಮತ ರೀತಿಯಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ವಿಫಲಗೊಳಿಸಲು ಹೊಸ ಹೊಸ ಭ್ರಷ್ಟ ಮತ್ತು ಅನುಚಿತ ವಿಧಾನ ಬಳಸುವ ಮೂಲಕ ಕಠಿಣ ಪರಿಶ್ರಮಿಗಳಿಗೆ ಅವಕಾಶ ಇಲ್ಲವಾಗಿಸುತ್ತಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಜನಸಾಮಾನ್ಯರಲ್ಲಿ ನಂಬಿಕೆ ದ್ರೋಹಕ್ಕೆ ಕಾರಣವಾಗುವುದಲ್ಲದೇ ರಾಜ್ಯವು ಗಣನೀಯ ಆಡಳಿತಾತ್ಮಕ ವೆಚ್ಚ ಅನುಭವಿಸಬೇಕಿದೆ. ಪರೀಕ್ಷೆ ನಡೆಸುವುಕೆ ಪ್ರಶ್ನಾರ್ಹವಾದಾಗ ರಾಜ್ಯದ ಗೌರವಕ್ಕೂ ಚ್ಯುತಿಯಾಗುತ್ತಿದೆ. ಉದ್ದೇಶಿತ ಕಾನೂನಿನ ಅಡಿ ಅಪರಾಧದಲ್ಲಿ ಭಾಗಿಯಾದವರಿಗೆ ಹತ್ತು ವರ್ಷ ಜೈಲು ಮತ್ತು ಹತ್ತು ಕೋಟಿ ರೂಪಾಯಿವರೆಗೆ ದಂಡ, ಸ್ವತ್ತುಗಳ ಜಪ್ತಿ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂಥ ಕಠಿಣ ಉಪಬಂಧಗಳನ್ನು ಒಳಗೊಂಡಿರುತ್ತದೆ. ಅಂಥ ಅಪರಾಧಗಳ ವಿಚಾರಣೆಗಾಗಿ ನ್ಯಾಯಾಲಯಗಳನ್ನು ಗೊತ್ತುಪಡಿಸುವುದಕ್ಕಾಗಿ ಕಾನೂನಿನಲ್ಲಿ ಉಪಬಂಧ ಕಲ್ಪಿಸಲಾಗಿದೆ.
ಮಸೂದೆಗಳ ಪ್ರತಿ ಇಲ್ಲಿವೆ: