ನ್ಯಾಯಾಲಯಗಳು, ನ್ಯಾಯಮೂರ್ತಿಗಳು ಈಚಿನ ವರ್ಷಗಳಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದು ಎಷ್ಟು ಬಾರಿ?

ಮುಕ್ತ ನ್ಯಾಯಾಂಗವು ಯಾವುದೇ ಸರ್ಕಾರದ ಪರವಾಗಿಯಾಗಲಿ ಹೀಗೆ ಬಹಿರಂಗವಾಗಿ ಹೇಳಿಕೆ ನೀಡುವುದು ಉತ್ತಮ ಕ್ರಮವಲ್ಲ ಎಂಬುದು ಸರ್ಕಾರಗಳ ನೀತಿ ನಿರ್ಧಾರಗಳನ್ನು ಮೌಲ್ಯಮಾಪನ ಮಾಡುವ ವಿಮರ್ಶಕರ ಅಭಿಮತ.
ನ್ಯಾಯಾಲಯಗಳು, ನ್ಯಾಯಮೂರ್ತಿಗಳು ಈಚಿನ ವರ್ಷಗಳಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದು ಎಷ್ಟು ಬಾರಿ?

PM Narendra Modi during his TV announcement


ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರವೊಂದು ಅಧಿಕಾರಕ್ಕೆ ಬಂದಾಗ ಆ ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಸಂಬಂಧ ಯಾವಾಗಲೂ ವಿಚಕ್ಷಣೆಗೆ ಒಳಗಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿಯೂ ಕೂಡ ಇದೇ ರೀತಿ ಆಗಿದೆ. ಬಹುತೇಕ ಎಲ್ಲಾ ರಾಜಕೀಯ ಸೂಕ್ಷ್ಮ ಪ್ರಕರಣಗಳು ತೀವ್ರ ಮಾಧ್ಯಮ ವಿಶ್ಲೇಷಣೆಗೆ ಒಳಪಟ್ಟಿವೆ.

ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಗಳು ಪ್ರಧಾನಿ ಮೋದಿಯವರನ್ನು ಬಹಿರಂಗವಾಗಿ ಹೊಗಳುತ್ತಿರುವ ಇತ್ತೀಚಿನ ನಿದರ್ಶನಗಳಿಗೆ ನ್ಯಾಯಾಂಗ, ರಾಜಕೀಯ ಹಾಗೂ ನೀತಿ ನಿರೂಪಣಾ ವಲಯಗಳಲ್ಲಿ ಗಂಭೀರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಕ್ತ ನ್ಯಾಯಾಂಗವೊಂದು ಸರ್ಕಾರದ ಪರವಾಗಿ ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಬಹಿರಂಗವಾಗಿ ಇಂತಹ ಹೇಳಿಕೆ ನೀಡುವುದು ಉತ್ತಮ ಕ್ರಮವಲ್ಲ ಎಂಬುದು ಸರ್ಕಾರಗಳ ನೀತಿ ನಿರ್ಧಾರಗಳನ್ನು ಮೌಲ್ಯಮಾಪನ ಮಾಡುವ ವಿಮರ್ಶಕರ ಅಭಿಮತ. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರದ ನೀತಿಗಳನ್ನು ಬೆಂಬಲಿಸಿಯೇ ನ್ಯಾಯಾಂಗದಿಂದ ಇಂತಹ ಮುಕ್ತ ಶ್ಲಾಘನೆ ವ್ಯಕ್ತವಾಗುತ್ತಿದೆ ಎಂಬುದು ಆಡಳಿತ ಪಕ್ಷದ ಬೆಂಬಲಿಗರ ಅಭಿಪ್ರಾಯ.

ಈಚಿನ ವರ್ಷಗಳಲ್ಲಿ ನ್ಯಾಯಾಲಯಗಳು/ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ 5 ನಿದರ್ಶನಗಳನ್ನು ಇಲ್ಲಿ ನೀಡಲಾಗಿದೆ:

1. ನ್ಯಾ. ಎಂಆರ್ ಶಾ (ಆಗಸ್ಟ್ 2018)

ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನ್ಯಾ. ಎಂ ಆರ್‌ ಶಾ (ಈಗ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ) ಅವರು ಬಿಬಿಸಿ ಹಿಂದಿ ವಾಹಿನಿಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಮೋದಿ ಒಬ್ಬ ಮಾದರಿ. ಅವರೊಬ್ಬ ಹೀರೊ. ಕಳೆದ ಒಂದು ತಿಂಗಳಿಂದ ಅವರ ಬಗ್ಗೆ ಹೀಗೆ ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸಾವಿರಾರು ಕ್ಲಿಪ್ಪಿಂಗ್‌ಗಳಿವೆ. ಪತ್ರಿಕೆಗಳು ಪ್ರತಿದಿನವೂ ಅದನ್ನೇ ಪ್ರಕಟಿಸುತ್ತಿವೆ” ಎಂದಿದ್ದರು.

ಶಾ ಅವರೀಗ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿದ್ದು ನವೆಂಬರ್ 2018 ರಲ್ಲಿ ಅವರಿಗೆ ಪದೋನ್ನತಿ ನೀಡಲಾಯಿತು.

2. ನ್ಯಾ. ಅರುಣ್ ಮಿಶ್ರಾ (ಫೆಬ್ರವರಿ 2020)

ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಂದನಾರ್ಪಣೆ ಭಾಷಣ ಮಾಡುತ್ತಾ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು, ಪ್ರಧಾನಿ ಮೋದಿ ಅವರು "ವಿಶ್ವಾತ್ಮಕವಾಗಿ ಚಿಂತಿಸುವ ಮತ್ತು ಸ್ಥಳೀಯವಾಗಿ ಕೆಲಸ ಮಾಡುವ ಬಹುಮುಖ ಪ್ರತಿಭೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸುಪ್ರೀಂಕೋರ್ಟ್‌ ವಕೀಲರ ಸಂಘ, ಬಾಂಬೆ ವಕೀಲರ ಸಂಘ, ಬಿಸಿಐ ಕಾರ್ಯಕಾರಿ ಸಮಿತಿ ಸೇರಿದಂತೆ ಸಮಾಜದ ವಿವಿಧ ಸ್ತರಗಳಿಂದ ಈ ಹೇಳಿಕೆಗೆ ಟೀಕೆ ವ್ಯಕ್ತವಾಗಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಅವರು ಈಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು.

3. ನ್ಯಾ. ಎಂ ಆರ್ ಶಾ (ಫೆಬ್ರವರಿ 2021)

ಎರಡನೇ ಬಾರಿ ನ್ಯಾ. ಶಾ ಅವರು ಮೋದಿ ಅವರನ್ನು ಹೊಗಳಿ ನೀಡಿದ ಹೇಳಿಕೆ ಅನೇಕರ ಗಮನ ಸೆಳೆಯಲಿಲ್ಲ. ಮೋದಿ ಅವರು “ಜನಪ್ರಿಯ, ಪ್ರೀತಿಪಾತ್ರ, ಸ್ಪಂದನಶೀಲ ಹಾಗೂ ದೂರದೃಷ್ಟಿಯುಳ್ಳ ನಾಯಕ" ಎಂದು ಅವರು ಗುಜರಾತ್‌ ಹೈಕೋರ್ಟ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಂಡಾಡಿದ್ದರು.

Also Read
ವಿವಿಗೆ ನೆಹರೂ ಹೆಸರಿಟ್ಟಿರುವಾಗ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ ಇದ್ದರೆ ತಪ್ಪೇನು? ಕೇರಳ ಹೈಕೋರ್ಟ್ ಪ್ರಶ್ನೆ

4. ಕೇರಳ ಹೈಕೋರ್ಟ್ (ಡಿಸೆಂಬರ್ 2021)

ಮೇಲಿನ ಹೊಗಳಿಕೆಗಳು ನ್ಯಾಯಾಲಯ ಕಲಾಪದ ಭಾಗವಾಗಿರದೆ ಸಮಾರಂಭದಲ್ಲಿ ಆಡಿದ ಮಾತುಗಳಾಗಿದ್ದವು. ಆದರೆ ಕೇರಳ ಹೈಕೋರ್ಟ್‌ ಡಿಸೆಂಬರ್ 21ರಂದು ನೀಡಿದ ತೀರ್ಪಿನಲ್ಲಿ ಮೋದಿ ಅವರನ್ನು ಹೊಗಳಿದ್ದು ಕಂಡುಬಂದಿತು.

"ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಹೆಸರಿದ್ದರೆ ಏನು ಸಮಸ್ಯೆ? ನೀವು (ಅರ್ಜಿದಾರರು) ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ, ಅವರೂ ಪ್ರಧಾನಿಯಾಗಿದ್ದವರು. ಆ ಹೆಸರನ್ನು ತೆಗೆದುಹಾಕುವಂತೆ ವಿಶ್ವವಿದ್ಯಾಲಯವನ್ನು ಏಕೆ ಕೇಳಬಾರದು?" ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ಪ್ರಶ್ನಿಸಿತು.

ಅಲ್ಲದೆ ಬೇರೆ ದೇಶಗಳಲ್ಲಿ ನೀಡಲಾಗುವ ಲಸಿಕೆ ಪ್ರಮಾಣಪತ್ರಗಳಲ್ಲಿ ಆಯಾ ನಾಯಕರ ಭಾವಚಿತ್ರಗಳಿಲ್ಲ ಎಂಬ ಅರ್ಜಿದಾರ ವಕೀಲ ಅಜಿತ್‌ ಜಾಯ್‌ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು "ಅವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆಪಡುವುದಿಲ್ಲ, ನಮ್ಮವರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಜನಾದೇಶದ ಕಾರಣದಿಂದ ಪ್ರಧಾನಿಯಾಗಿದ್ದಾರೆ. ನಾವು ವಿಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಹೊಂದಿದ್ದರೂ ಅವರು ಇನ್ನೂ ನಮ್ಮ ಪ್ರಧಾನಿ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

5. ಅಲಾಹಾಬಾದ್ ಹೈಕೋರ್ಟ್ (ಡಿಸೆಂಬರ್ 2021)

ಸಾಂವಿಧಾನಿಕ ನ್ಯಾಯಾಲಯ/ನ್ಯಾಯಮೂರ್ತಿಗಳು ಪ್ರಧಾನ ಮಂತ್ರಿ ಅವರನ್ನು ಹೊಗಳಿದ ಇತ್ತೀಚಿನ ಉದಾಹರಣೆ ಇದು. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಯಾದವ್ ಅವರು ಡಿಸೆಂಬರ್ 23, 2021 ರಂದು ನೀಡಿದ ತೀರ್ಪಿನಲ್ಲಿ, ಭಾರತದಂತಹ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ "ಉಚಿತ ಲಸಿಕೆ" ನೀಡಲು ಪ್ರಧಾನಿ ಮೋದಿ ಅವರು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು. ಕುತೂಹಲಕರ ಸಂಗತಿ ಎಂದರೆ ಪ್ರಧಾನಿ ಮತ್ತು ಅವರ ನೀತಿಗಳಿಗೆ ಸಂಬಂಧ ಇಲ್ಲದ ಪ್ರಕರಣವೊಂದರಲ್ಲಿ, ವ್ಯಕ್ತಿಯೊಬ್ಬರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದಿಂದ ಈ ಅಭಿಪ್ರಾಯ ವ್ಯಕ್ತವಾಗಿತ್ತು.

Related Stories

No stories found.
Kannada Bar & Bench
kannada.barandbench.com