Karnataka HC and Justice Mohammad Nawaz
Karnataka HC and Justice Mohammad Nawaz

ಅಪಾರ್ಟ್‌ಮೆಂಟ್‌ನಲ್ಲಿ ಗುಂಪು ಕಟ್ಟಿ ಸಾಮಾಜಿಕ ಬಹಿಷ್ಕಾರದ ಆರೋಪ: ಇಬ್ಬರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

ಬೆಂಗಳೂರಿನ ಕೈಲಾಶ್‌ ಹೌಸಿಂಗ್‌ ಅಪಾರ್ಟ್‌ಮೆಂಟ್ಸ್‌ ಜ್ಞಾನ ಭಾರತಿ ಎನ್‌ಕ್ಲೇವ್‌ನ ನಿವಾಸಿಯಾದ ಕೆ ಎಸ್‌ ರವಿಕುಮಾರ್‌ ಅವರು ರಾಮಾಂಜನೇಯಲು ಮತ್ತು ಭಾಸ್ಕರ್‌ ನರಸಿಂಹಯ್ಯ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ನೆರೆಹೊರೆಯ ಫ್ಲ್ಯಾಟ್‌ ಮಾಲೀಕರು ಬ್ರಾಹ್ಮಣರ ಗುಂಪು ಕಟ್ಟಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಮುದಾಯದ (ಆದಿ ಕರ್ನಾಟಕ) ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ಕೈಲಾಶ್‌ ಹೌಸಿಂಗ್‌ ಅಪಾರ್ಟ್‌ಮೆಂಟ್ಸ್‌ ಜ್ಞಾನ ಭಾರತಿ ಎನ್‌ಕ್ಲೇವ್‌ನ ನಿವಾಸಿಗಳಾದ ನಿವೃತ್ತ ವಿಜ್ಞಾನಿ ರಾಮಾಂಜನೇಯಲು ಮತ್ತು ಕೆಎಸ್‌ಎಫ್‌ಸಿಯಲ್ಲಿ ವ್ಯವಸ್ಥಾಪಕರಾಗಿರುವ ಭಾಸ್ಕರ್‌ ನರಸಿಂಹಯ್ಯ ಅವರು ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಮೇಲ್ಮನವಿದಾರರ ವಿರುದ್ಧದ ನಿರ್ದಿಷ್ಟ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಇಟ್ಟಿರುವ ದಾಖಲೆಗಳು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ತೋರಿಸಲು ಸಾಕಾಗುವುದಿಲ್ಲ. ದೂರುದಾರ ಪರಿಶಿಷ್ಟ ಜಾತಿಗೆ ಸೇರಿದ ಕಾರಣಕ್ಕಾಗಿ ಮೇಲ್ಮನವಿದಾರರು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗದು. ಹೀಗಾಗಿ, ಮೇಲ್ಮನವಿದಾರರ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್‌ 18 ಅಥವಾ 18ಎ ಅಡ್ಡಿಯಾಗುವುದಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಹಾಲಿ ಪ್ರಕರಣದ ಈಗಾಗಲೇ ಸಂಜ್ಞೇ ಪರಿಗಣಿಸಿರುವುದರಿಂದ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸಲಾಗದು ಎಂದಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ. ಅರ್ಜಿದಾರರು 15 ದಿನಗಳಲ್ಲಿ ಸಂಬಂಧಿತ ನ್ಯಾಯಾಲಯದಲ್ಲಿ ಹಾಜರಾಗಿ ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ತಮ್ಮ ನಿವಾಸದ ಮಾಹಿತಿ ಒದಗಿಸಬೇಕು. ಸಾಕ್ಷ್ಯ ತಿರುಚಬಾರದು. ವಿಶೇಷ ಕಾರಣಗಳನ್ನು ಹೊರತುಪಡಿಸಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಬರುವ ವಲಗೇರಹಳ್ಳಿಯಲ್ಲಿರುವ ಕೈಲಾಶ್‌ ಹೌಸಿಂಗ್‌ ಅಪಾರ್ಟ್‌ಮೆಂಟ್ಸ್‌ ಜ್ಞಾನ ಭಾರತಿ ಎನ್‌ಕ್ಲೇವ್‌ನ ನಿವಾಸಿಯಾದ ಕೆ ಎಸ್‌ ರವಿಕುಮಾರ್‌ ಅವರು ರಾಮಾಂಜನೇಯಲು ಮತ್ತು ಭಾಸ್ಕರ್‌ ನರಸಿಂಹಯ್ಯ ಅವರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಕೈಲಾಶ್‌ ಅಪಾರ್ಟ್‌ಮೆಂಟ್‌ನ ಅನಾಮಿಕರ ವಿರುದ್ಧ ರವಿಕುಮಾರ್‌ ಅವರು ಸರಣಿ ಆರೋಪ ಮಾಡಿದ್ದು, ಕ್ರಿಮಿನಲ್‌ ಪಿತೂರಿ ನಡೆಸಿ ಅನಗತ್ಯವಾಗಿ ಜಗಳ ಸೃಷ್ಟಿಸಲು ಬಯಸುತ್ತಿದ್ದಾರೆ. ಕೆಲವರು ತನ್ನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮೋಟಾರ್‌ ಸೈಕಲ್‌ ನಿಲ್ಲಿಸಿದರೆ ಚಕ್ರ ಪಂಕ್ಚರ್‌ ಮಾಡುವುದು, ಸ್ಪಾರ್ಕ್‌ ಪ್ಲಗ್‌ ಕೀಳುವುದು, ತನ್ನ ಫ್ಲ್ಯಾಟ್‌ ಮುಂದೆ ಕಸ ಚೆಲ್ಲುವುದು, ಟ್ಯೂಬ್‌ ಲೈಟ್‌ ಆಫ್‌ ಮಾಡುವ ಮೂಲಕ ಕಿರುಕುಳ ನೀಡಿದ್ದಾರೆ. ಬಿಎಸ್‌ಎನ್‌ಎಲ್‌ನಿಂದ ಇಂಟರ್‌ನೆಟ್‌ ಸೌಲಭ್ಯ ಪಡೆಯಲು ಅಡ್ಡಿಪಡಿಸಿದ್ದಾರೆ. ಕೆಲವರು ಬ್ರಾಹ್ಮಣ ಗುಂಪು ಕಟ್ಟಿಕೊಂಡು ತಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

2018ರ ಜನವರಿ 1ರಂದು ಕೈಲಾಶ್‌ ಬಿಡಿಎ ಅಪಾರ್ಟ್‌ಮೆಂಟ್ ಓನರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ (ಕೆಬಿಎಒಡಬ್ಲ್ಯುಎ) ಅಧ್ಯಕ್ಷರಾದ ರಾಮಾಂಜನೇಯಲು ಅವರಿಗೆ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ನೀಡಲು ಅಥವಾ ಅದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲು ರವಿಕುಮಾರ್‌ ಕೋರಿದ್ದರು. ಆದರೆ, ಇದನ್ನು ಪರಿಹರಿಸುವುದಕ್ಕೆ ಬದಲಾಗಿ ರಾಮಾಂಜನೇಯಲು ಅವರು ತಮ್ಮನ್ನು ನಿಂದಿಸಿದ್ದಾರೆ. ಕೆಬಿಎಒಡಬ್ಲ್ಯುಎ ಕಚೇರಿಯಿಂದ ಹೊರಹೋಗುವಂತೆ ಸೂಚಿಸಿದ್ದಲ್ಲದೇ ತಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ತಿಳಿದೂ ನೆರೆದಿದ್ದವರ ಎದುರು ಬೈಲಾ ಹೆಸರಿನಲ್ಲಿ ಅವಮಾನಿಸಿದ್ದಾರೆ. ಎರಡನೇ ಆರೋಪಿ ಭಾಸ್ಕರ್‌ ನರಸಿಂಹಯ್ಯ ಅವರು ತಮ್ಮ ಮನೆಗೆ ಬಂದು ಪ್ರಕರಣ ಹಿಂಪಡೆಯುವಂತೆ ಪತ್ನಿಗೆ ಒತ್ತಡ ಹಾಕಿದ್ದಾರೆ. ಇಲ್ಲವಾದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಅಲ್ಲದೇ, ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದ ನಿರ್ಣಯಗಳನ್ನು ಕೆಲವೇ ಕೆಲವರಿಗೆ ತಿಳಿಸುವ ಕೆಲಸ ಮಾಡಿದ್ದಾರೆ.

ಪೊಲೀಸರು ಆರೋಪಿಗಳ ಜೊತೆ ಕೈಜೋಡಿಸಿ ಐಪಿಸಿ ಸೆಕ್ಷನ್‌ಗಳಾದ 504, 506, 153(ಎ), 109, 500, 501 and 120ಬಿ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(i)(x) ಅಡಿ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ ಎಂದು ರವಿಕುಮಾರ್‌ ದೂರಿದ್ದಾರೆ. ಇದಕ್ಕೆ ಆಕ್ಷೇಪಿಸಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯವು ಸಂಜ್ಞೇಯಾಗಿ ಪರಿಗಣಿಸಿದೆ. ಆನಂತರ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತ್ತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌, ವಕೀಲ ಮಟ್ಟದ್‌ ಚಿದಾನಂದಸ್ವಾಮಿ ವಾದಿಸಿದ್ದರು.

Attachment
PDF
Ramanjaneyulu & other Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com